ಅರಕೇರಾದಲ್ಲಿ ಹಬ್ಬದ ವಾತಾವರಣ ನಿರ್ಮಾಣ

15102022 devadurga grama vastavya
Published on

ದೇವದುರ್ಗ: ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಹಾಗೂ ಕಂದಾಯ ಸಚಿವ ಆರ್.ಅಶೋಕ ಅವರ ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ ಅರಕೇರದಲ್ಲಿ ಶನಿವಾರ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಸಚಿವ ಆರ್.ಅಶೋಕ ಅವರನ್ನು ಬಿಜೆಪಿ ಕಾರ್ಯಕರ್ತರು ಸಿರವಾರದಿಂದ ಅರಕೇರಾವರೆಗೆ ಬೈಕ್ ರ‌್ಯಾಲಿ ಮೂಲಕ ಸ್ವಾಗತಿಸಿದರು. ಗ್ರಾಮದ ಹೊರವಲಯದಿಂದ ಶಾಸಕ ಕೆ.ಶಿವನಗೌಡ ನಾಯಕ ನೇತೃತ್ವ್ವದಲ್ಲಿ ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಮಾಡಲಾಯಿತು. ಮಹಿಳೆಯರ ಆರತಿ ಬೆಳಗಿ ಸ್ವಾಗತಿಸಿದರು. ಕುಂಭ-ಕಳಸ, ಡೊಳ್ಳು ಕುಣಿತ, ಹಲಗೆ ಬಡಿತ ಇತರ ವಾದ್ಯ ಮೇಳ ಗಮನ ಸೆಳೆಯಿತು. ಗ್ರಾಮ ಹಾಗೂ ಸಚಿವ ಅಶೋಕ ವಾಸ್ತವ್ಯ ಮಾಡಿದ್ದ ಬಾಲಕರ ಹಾಸ್ಟೆಲ್ ಅನ್ನು ತಳಿರು ತೋರಣದಿಂದ ಅಲಂಕರಿಸಲಾಗಿತ್ತು.

ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಳಿಗೆಗಳಲ್ಲಿ ಮಹಿಳೆಯರು ತಯಾರಿಸಿದ್ದ ಸಿದ್ಧ ಉಡುಪುಗಳು, ವಿವಿಧ ತಿಂಡಿಗಳು, ಸ್ವಸಹಾಯ ಸಂಘಗಳು ತಯಾರಿಸಿದ್ದ ಉಪ್ಪಿನಕಾಯಿ, ಹಪ್ಪಳ, ಸಂಡಿಗೆ ಹಾಗೂ ಲಂಬಾಣಿ ಸಮುದಾಯದ ಉಡುಪುಗಳು ಗಮನ ಸೆಳೆದವು. ತರಕಾರಿ, ಮೊಟ್ಟೆ, ಬೇಳೆ ಕಾಳು ಪ್ರದರ್ಶಿಸಿ ಪೌಷ್ಟಿಕದ ಬಗ್ಗೆ ಮಾಹಿತಿ ನೀಡಲಾಯಿತು. ಪ್ರವಾಸೋದ್ಯಮ ಇಲಾಖೆಯಿಂದ ಮೂವರು ಫಲಾನುಭವಿಗಳಿಗೆ ಕಾರು ವಿತರಣೆ ಮಾಡಲಾಯಿತು. ಯುವಜನ ಹಾಗೂ ಕೌಶಲಾಭಿವೃದ್ಧಿ ಕೌಂಟರ್‌ನಲ್ಲಿ 28 ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ ಮಾಡಲಾಯಿತು. ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಕೌಂಟರ್‌ನಲ್ಲಿ 389 ಫಲಾನುಭವಿಗಳಿಗೆ ತ್ರಿಚಕ್ರದ ವಾಹನ, ಊರುಗೋಲು, ಕೃತಕ ಕೈಕಾಲು ವಿತರಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net