

ದೇವದುರ್ಗ: ಗಬ್ಬೂರು ಗ್ರಾಮದ ಇಬ್ಬರು ನಿರ್ಗತಿಕರ ಬದುಕಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳಕಿನ ಕಿರಣವಾಗಿ ಮೂಡಿಬಂದಿದೆ. ಕಸ್ತೂರಮ್ಮ ಹಾಗೂ ಮಲ್ಲಮ್ಮ ಭೀಮಣ್ಣ ಎಂಬ ಫಲಾನುಭವಿಗಳಿಗೆ ವಾತ್ಸಲ್ಯ ಸೂರು ಯೋಜನೆಯಡಿ ಸಂಸ್ಥೆಯಿಂದ ಎರಡು ಮನೆ ನಿರ್ಮಿಸಿ ಕೊಡಲಾಗಿದೆ.
ಯೋಜನೆಯ ಪ್ರಾದೇಶಿಕ ನಿರ್ದೇಶಕ ಗಣೇಶ್.ಬಿ ಫಲಾನುಭವಿ ಕಸ್ತೂರಮ್ಮ ಹಾಗೂ ಮಲ್ಲಮ್ಮ ಭೀಮಣ್ಣ ದಂಪತಿಗೆ ವಾತ್ಸಲ್ಯ ಮನೆ ಹಸ್ತಾಂತರಿಸಿ ಮಾತನಾಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಸೇವಾ ಮನೋಭಾವ ಚಿಂತನೆಯಡಿ ನಿರ್ಗತಿಕ ಕುಟುಂಬಗಳಿಗೆ ವಾತ್ಸಲ್ಯ ಸೂರು ಯೋಜನೆಯಡಿ ಮನೆ ನಿರ್ಮಿಸಿಕೊಡಲಾಗುತ್ತಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 4 ದಶಕಗಳಿಂದ ರಾಜ್ಯಾದ್ಯಂತ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. 12 ಸಾವಿರ ಕಡುಬಡ ಕುಟುಂಬಗಳಿಗೆ ಜೀವನ ನಿರ್ವಹಣೆಗಾಗಿ ಮಾಸಿಕ ಸಹಾಯಧನ ನೀಡುತ್ತಿದೆ. ಅರ್ಹ ಕುಟುಂಬಗಳನ್ನು ಗುರುತಿಸಿ ಪಾತ್ರೆ, ಪರಿಕರಗಳು, ವಸ್ತ್ರ ಹಾಗೂ ಅಗತ್ಯ ವಸ್ತುಗಳ ಕಿಟ್‌ಗಳನ್ನು ಒದಗಿಸಲಾಗಿದೆ. ಆಸರೆ ಕಲ್ಪಿಸುವುದು ಡಾ.ಹೇಮಾವತಿ ವಿ.ಹೆಗ್ಗಡೆ ಅವರ ಕನಸಾಗಿದೆ ಎಂದರು. ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಸತೀಶ್ ಬಳೆ, ಯುವ ಬ್ರಿಗೇಡ್ ಸದಸ್ಯರು, ಯೋಜನೆಯ ಕಾರ್ಯಕರ್ತರು, ಒಕ್ಕೂಟದ ಪದಾಧಿಕಾರಿಗಳು ಇದ್ದರು.