

ದೇವದುರ್ಗ: ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಹಲವು ಅವಾಂತರ ಸೃಷ್ಟಿಸಿದೆ. ಜಾಲಹಳ್ಳಿ ಜೆಸ್ಕಾಂ ಕಚೇರಿ ಸಂಪೂರ್ಣ ಜಲಾವೃತವಾಗಿದ್ದು, ವಿದ್ಯುತ್ ಪೂರೈಕೆಗೆ ಸಮಸ್ಯೆಯಾಗಿದೆ.
ಶನಿವಾರ ಸಂಜೆಯಿಂದ ಭಾನುವಾರ ಸಂಜೆವರೆಗೆ ನಿರಂತರ ಮಳೆ ಸುರಿಯಿತು. ಜಾಲಹಳ್ಳಿ ಜೆಸ್ಕಾಂ ಕಚೇರಿ ಆವರಣದಲ್ಲಿ ಎರಡು ದಿನಗಳಿಂದ ನೀರು ನಿಂತಿದೆ. ಇದರಿಂದಾಗಿ ಜಾಲಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ವಿದ್ಯುತ್ ಪೂರೈಕೆಗೆ ಹಿನ್ನಡೆಯಾಗಿದೆ. ಪಂಪ್‌ಸೆಟ್ ಹಚ್ಚಿ ಆವರಣದಲ್ಲಿ ನಿಂತ ನೀರು ಹೊರಹಾಕಲಾಗುತ್ತಿದೆ. ವಿದ್ಯುತ್ ಇಲ್ಲದೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಜಾಲಹಳ್ಳಿಯ ಕನ್ಯಾ ಪ್ರಾಥಮಿಕ ಶಾಲೆ ಆವರಣದಲ್ಲಿ ನೀರುನಿಂತು ಕೆರೆಯಂತಾಗಿದೆ. ಮುರಾರ್ಜಿ ವಸತಿ ಶಾಲೆ ಜಲಾವೃತಗೊಂಡಿದ್ದು ಮಕ್ಕಳು ಆತಂಕದಲ್ಲಿದ್ದಾರೆ. ಹೊಸೂರು ಸಿದ್ದಾಪುರ ಗ್ರಾಮದಲ್ಲಿ ಶನಿವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಗ್ರಾಮದ ಆರಾಧ್ಯ ದೈವ ಮಾರುತಿ ದೇವಸ್ಥಾನ ಜಲಾವೃತಗೊಂಡಿದ್ದು ಗರ್ಭಗುಡಿಗೆ ನೀರು ನುಗ್ಗಿದೆ. ಮನೆಯಲ್ಲಿದ್ದ ದವಸ-ಧಾನ್ಯ, ಗೃಹಬಳಕೆ ವಸ್ತುಗಳು ಹಾಳಾಗಿ ಜನರು ರಾತ್ರಿಯಿಡೀ ಸಮಸ್ಯೆ ಎದುರಿಸಿದರು.
ದೇವದುರ್ಗದ ಖಾಸಗಿ ಆಸ್ಪತ್ರೆ ಆವರಣದಲ್ಲಿ ಮರ ಧರೆಗುರುಳಿದೆ. ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ಮಳೆನೀರು ನಿಂತು ಜನರು ಸಂಕಷ್ಟ ಅನುಭವಿಸಿದರು. ಬಸ್‌ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಮಳೆ ನೀರುನಿಂತು ಪ್ರಯಾಣಿಕರು ಸಮಸ್ಯೆ ಎದುರಿಸಿದರು. ಹಲವು ಕಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ.
ಪಟ್ಟಣದ ಬಸ್‌ನಿಲ್ದಾಣ, ಮಿನಿವಿಧಾನಸೌಧ ರಸ್ತೆ, ಗಾಂಧಿ ವೃತ್ತ, ಜೆಪಿ ಚೌಕ್ ಸೇರಿ ವಿವಿಧೆಡೆ ಮಳೆನೀರು ನಿಂತು ರಸ್ತೆಗಳು ಕೆಸರು ಗದ್ದೆಯಂತೆ ಆಗಿವೆ. ಗಬ್ಬೂರು ರಾಜ್ಯ ಹೆದ್ದಾರಿಯಲ್ಲಿ ಮಳೆನೀರು ನಿಂತು ಕೆರೆಯಂತಾಗಿದೆ. ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿ ಜನರು ಸಂಕಟ ಎದುರಿಸುತ್ತಿದ್ದಾರೆ. ದೇವದುರ್ಗದಲ್ಲಿ 10 ಮಿಮೀ, ಗಬ್ಬೂರು 54., ಅರಕೇರಾ 40.2, ಗಲಗ 31.1, ಜಾಲಹಳ್ಳಿ 131.2 ಮಿಮೀ ಮಳೆಯಾಗಿದೆ.