ಪಲ್ಸ್ ಮ್ಯಾಜಿಕ್ ಇಳುವರಿ ಹೆಚ್ಚಳ

Untitled design (5)
ಹೇರುಂಡಿ ಗ್ರಾಮದಲ್ಲಿ ತೊಗರಿ ಬೆಳೆಗೆ ಪಲ್ಸ್ ಮ್ಯಾಜಿಕ್ ಬಳಕೆ ತರಬೇತಿ ಶಿಬಿರ ನಡೆಯಿತು. ಕೃಷಿ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ.ಹನುಮಂತಪ್ಪ ಶ್ರೀಹರಿ, ಕೃಷಿ ಕೀಟಶಾಸ್ತ್ರದ ವಿಜ್ಞಾನಿ ಡಾ.ಶ್ರೀವಾಣಿ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ.ದೇವೇಂದ್ರ ಬೀರಲದಿನ್ನಿ, ಕೃಷಿ ಕೀಟ ವಿಜ್ಞಾನಿ ಡಾ.ಕೃಷ್ಣ ಬಿರಾದಾರ ಪಾಟೀಲ್ ಇದ್ದರು.
Published on

ದೇವದುರ್ಗ: ದ್ವಿದಳ ಧಾನ್ಯಗಳ ಅಭಿವೃದ್ಧಿ ಹಾಗೂ ಉತ್ತಮ ಇಳುವರಿಗಾಗಿ ಪಲ್ಸ್ ಮ್ಯಾಜಿಕ್ ಎನ್ನುವ ಹೊಸ ಪೋಷಕಾಂಶ ವಿಧಾನ ಪರಿಚಯಿಸಲಾಗಿದೆ. ಇದು ದ್ವಿದಳ ಧಾನ್ಯಗಳ ಸಮೃದ್ಧಿ ಇಳುವರಿಗೆ ಸಹಕಾರಿಯಾಗಿದೆ ಎಂದು ರಾಯಚೂರು ಕೃಷಿ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ.ಹನುಮಂತಪ್ಪ ಶ್ರೀಹರಿ ಹೇಳಿದರು.

ತಾಲೂಕಿನ ಹೇರುಂಡಿ ಗ್ರಾಮದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರದಿಂದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಹಮ್ಮಿಕೊಂಡಿದ್ದ ತೊಗರಿ ಬೆಳೆಗೆ ಪಲ್ಸ್ ಮ್ಯಾಜಿಕ್ ಬಳಕೆ ತರಬೇತಿ ಶಿಬಿರ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.

ರಾಯಚೂರು ಕೃಷಿ ವಿವಿ ಅಧೀನದ ಕಲಬುರಗಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಸುಮಾರು 2ವರ್ಷದವರೆಗೆ ಸಂಶೋಧನೆ ನಡೆಸಿ ಪಲ್ಸ್ ಮ್ಯಾಜಿಕ್ ಎಂಬ ಪೋಷಕಾಂಶ ಕಂಡುಹಿಡಿದಿದ್ದಾರೆ. ಪಲ್ಸ್ ಮ್ಯಾಜಿಕ್ ದ್ವಿದಳ ಧಾನ್ಯದ ಬೆಳೆಗಳಿಗೆ ನಿರ್ದಿಷ್ಟವಾದ ಪೋಷಕಾಂಶ ಮಿಶ್ರಣವಾಗಿದೆ. ಮುಖ್ಯ ಹಾಗೂ ಸೂಕ್ಷ್ಮ ಪೋಷಕಾಂಶದ ಜತೆಗೆ ಸಸ್ಯ ಪ್ರಚೋದಕ ಒಳಗೊಂಡಿದೆ. ಪಲ್ಸ್ ಮ್ಯಾಜಿಕ್ ಬಳಕೆಯಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಎಂದರು.

ಕೃಷಿ ಕೀಟಶಾಸ್ತ್ರದ ವಿಜ್ಞಾನಿ ಡಾ.ಶ್ರೀವಾಣಿ ಮಾತನಾಡಿ, ಪಲ್ಸ್ ಮ್ಯಾಜಿಕ್‌ನ್ನು 10 ಗ್ರಾಂ ಪುಡಿ ಮತ್ತು 0.5 ಮಿ.ಲೀ. ದ್ರಾವಕ 1 ಲೀಟರ್ ನೀರಿನಲ್ಲಿ ಬೆರೆಸಿ ಮಿಶ್ರಣಮಾಡಿ ಸಿಂಪಡಿಸಬೇಕು. ಬೆಳಗ್ಗೆ 8ರಿಂದ 10 ಹಾಗೂ ಸಂಜೆ 4ರಿಂದ 6 ಗಂಟೆಯವರೆಗೆ ಸಿಂಪಡಣೆ ಮಾಡಬೇಕು. ಪಲ್ಸ್ ಮ್ಯಾಜಿಕ್ ಮೊದಲ ಸಿಂಪಡಣೆ ಬೆಳೆಯ ಶೇ.50 ಹೂವಾಡುವ ಹಂತದಲ್ಲಿ ಹಾಗೂ ಎರಡನೇ ಸಿಂಪಡಣೆ 15ದಿನಗಳ ನಂತರ ಕೈಗೊಳ್ಳಬೇಕು ಎಂದರು.
ಪಲ್ಸ್ ಮ್ಯಾಜಿಕನ್ನು ಯಾವುದೇ ಕೀಟನಾಶಕ ಅಥವಾ ಶಿಲೀಂದ್ರನಾಶಕ (ತಾಮ್ರಯುಕ್ತ ಹೊರತುಪಡಿಸಿ) ಗಳೊಂದಿಗೆ ಮಿಶ್ರಣ ಮಾಡಬಹುದು. ಪ್ರತಿ ಎಕರೆಗೆ 4 ಕಿಗ್ರಾಂ ಪಲ್ಸ್ ಮ್ಯಾಜಿಕ್ ಬಳಸಿ ಹೆಚ್ಚಿನ ಇಳುವರಿ ಪಡೆಯಬಹುದು. ಪಲ್ಸ್ ಮ್ಯಾಜಿಕ್ ಬೇರೆ ದ್ವಿದಳ ಹಾಗೂ ಬೆಳೆಕಾಳು ಬೆಳೆಗಳಲ್ಲಿ ಕೂಡ ಉಪಯೋಗಿಸಬಹುದು ಎಂದರು.

ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ.ದೇವೇಂದ್ರ ಬೀರಲದಿನ್ನಿ, ಕೃಷಿ ಕೀಟ ವಿಜ್ಞಾನಿ ಡಾ.ಕೃಷ್ಣ ಬಿರಾದಾರ ಪಾಟೀಲ್, ಸಿಬ್ಬಂದಿ ಪ್ರವೀಣ್, ಸಂತೋಷ, ಶಿವಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net