

ದೇವದುರ್ಗ: ಇಂದಿನ ಕಲುಷಿತ ವಾತಾವರಣದಿಂದ ಬಹುತೇಕ ಬೆಳೆಗಳಿಗೆ ಕೀಟಬಾಧೆ ಆವರಿಸುತ್ತಿವೆ. ಕೀಟಬಾಧೆ ಬಗ್ಗೆ ರೈತರು ಆತಂಕ ಪಡದೆ ಕೃಷಿ ವಿಜ್ಞಾನಿಗಳ ಸಲಹೆ ಪಡೆಯಬೇಕು ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿವಿ ವಿಸ್ತರಣಾ ನಿರ್ದೇಶಕ ಡಾ.ಎಂ.ಕೆ.ನಾಯಕ್ ಹೇಳಿದರು.
ಸಿರವಾರ ತಾಲೂಕಿನ ಜಕ್ಕಲದಿನ್ನಿ ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರ, ರಾಯಚೂರು ಕೃಷಿ ವಿವಿವಿ, ಕೃಷಿ ಸಂಶೋಧನಾ ಕೇಂದ್ರ ಹಾಗೂ ತಾಂತ್ರಿಕ ಮಹಾವಿದ್ಯಾಲಯದಿಂದ ಆಯೋಜಿಸಿದ್ದ ಬಿಟಿ ಹತ್ತಿಯಲ್ಲಿ ಗುಲಾಬಿ ಕಾಯಿಕೊರಕದ ಸಮಗ್ರ ನಿರ್ವಹಣೆ ಹಾಗೂ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ಕೀಟಶಾಸ್ತ್ರ ಉಪನ್ಯಾಸಕ ಡಾ.ಎ.ಜಿ.ಶ್ರೀನಿವಾಸ್ ಮಾತನಾಡಿ, ಗುಲಾಬಿ ಕಾಯಿಕೊರಕದ ನಿರ್ವಹಣೆಗೆ ಎಕರೆಗೆ 2ರಂತೆ ಮೋಹಕ ಬಲೆಗಳ ಅಳವಡಿಕೆ, ಕೀಟ ಕುಟುಂಬ ನಿಯಂತ್ರಣ ಪದ್ಧತಿ, ನೂತನ ಸಂಯೋಗದ ಅಡಚಣೆ ತಂತ್ರಜ್ಞಾನ ಬಳಸಿ ಹತ್ತಿ ಗುಲಾಬಿ ಕಾಯಿಕೊರಕದ ಪರಿಣಾಮಕಾರಿ ನಿರ್ವಹಣೆ ಮಾಡಬಹುದು. ಈ ತಂತ್ರಜ್ಞಾನವು ಅಂಟಿನ ರೂಪದಲ್ಲಿದ್ದು ಇದು ಲಿಂಗಾರ್ಷಕ (ಹೆಣ್ಣು ಪತಂಗದ ವಾಸನೆ) ವಾಸನೆಯನ್ನು ಹೊರಸೂಸುತ್ತದೆ. ಇದಕ್ಕೆ ಗುಲಾಬಿ ಕಾಯಿಕೊರಕದ ಗಂಡು ಪತಂಗಗಳು ಆಕರ್ಷಣೆಗೊಂಡು ಹೆಣ್ಣು ಪತಂಗವೆಂದು ಗೊಂದಲವಾಗಿ ಈ ಅಂಟನ್ನು ತಲುಪುತ್ತವೆ. ಇದರಿಂದ ಗಂಡು ಹೆಣ್ಣು ಸಂಯೋಗ ಹೊಂದುವುದು ತಪ್ಪಿ ಮುಂದೆ ತತ್ತಿಗಳನ್ನು ಇಡುವುದಿಲ್ಲ. ಇದರಿಂದ ಹತ್ತಿ ಬೆಳೆಯಲ್ಲಿ ಕಾಯಿ ನಷ್ಟ ಕಡಿಮೆಯಾಗಿ ಕೀಟನಾಶಕ ಸಿಂಪಡಣೆ ಪ್ರಮಾಣ ಕಡಿಮೆಯಾಗುತ್ತದೆ ಎಂದು ತಿಳಿಸಿದರು. ಕೇಂದ್ರದ ಮುಖ್ಯಸ್ಥ ಡಾ.ಪ್ರಹ್ಲಾದ್ ಮಾತನಾಡಿದರು. ಜಕ್ಕಲದಿನ್ನಿ, ಲಕ್ಕಂದಿನ್ನಿ, ನಾಗಡದಿನ್ನಿ, ಅಡಕಲಗುಡ್ಡ, ತಿಪ್ಪಲದಿನ್ನಿ ರೈತರು ಭಾಗವಹಿಸಿದ್ದರು.