

ದೇವದುರ್ಗ: ಮೂರು ಕೃಷಿ ಕಾಯ್ದೆ ರದ್ದು ಹಾಗೂ ವಿದ್ಯುತ್ ಖಾಸಗೀಕರಣ ಮಸೂದೆ ವಾಪಸ್ ಪಡೆಯಲು ಆಗ್ರಹಿಸಿ ಪಟ್ಟಣದ ಮಿನಿವಿಧಾನಸೌಧದಲ್ಲಿ ರೈತ ಸಂಘದ ಮುಖಂಡರು, ಪ್ರಭಾರ ತಹಸೀಲ್ದಾರ್ ಶ್ರೀನಿವಾಸ್ ಚಾಪಲ್‌ರಿಗೆ ಶನಿವಾರ ಮನವಿ ಸಲ್ಲಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಮುಂದಾಗಿರುವ ನಡೆ ಖಂಡನೀಯ. ವಿದ್ಯುತ್ ಖಾಸಗೀಕರಣದಿಂದ ರೈತರು, ಬಡವರು ಸಂಕಷ್ಟ ಎದುರಿಸಲಿದ್ದಾರೆ. ಮೂರು ಕೃಷಿ ಕಾಯ್ದೆಯಿಂದ ದೇಶದ ಬಡ ಜನರಿಗೆ ತೊಂದರೆಯಾಗಲಿದೆ. ಕೇಂದ್ರ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ರೈತರ ಪಂಪ್‌ಸೆಟ್‌ಗೆ ಮೀಟರ್ ಅಳವಡಿಸದೆ ಉಚಿತ ವಿದ್ಯುತ್ ನೀಡಬೇಕು. ಬೆಂಬಲ ಬೆಲೆಯಲ್ಲಿ ಬೆಳೆ ಖರೀದಿಸಿದ ರೈತರಿಗೆ ಹಣ ನೀಡಬೇಕು. ಅಕ್ರಮ ಸಕ್ರಮ ಅರ್ಜಿ ವಿಲೇವಾರಿ ಮಾಡಿ, ಹೊಸ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆ ಕೆಲಸದ ಅವಧಿ 200ದಿನ ಹಾಗೂ ಕೂಲಿ ಹಣ 400ರೂ.ಗೆ ಹೆಚ್ಚಿಸಬೇಕು. ಮುಂದಿನ ಬೆಳೆ ಬರುವ ಮುನ್ನ ಖರೀದಿ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿದರು.
ಸಂಘಧ ತಾಲೂಕು ಅಧ್ಯಕ್ಷ ಗಿರಿಲಿಂಗಸ್ವಾಮಿ, ಜಿಲ್ಲಾ ಸಮಿತಿ ಸದಸ್ಯ ಮಲ್ಲಯ್ಯ ಕಟ್ಟಿಮನಿ, ಕಾರ್ಯದರ್ಶಿ ಸಿದ್ದಲಿಂಗಪ್ಪ ಜೇರಬಂಡಿ, ದುರುಗಣ್ಣ ಇರಬಗೇರಾ, ಶಿವಪ್ಪ ಸಮುದ್ರ, ಶಿವರಾಜ ಕಟ್ಟಿಮನಿ, ಗೋನಪ್ಪ ಎಚ್.ಎನ್.ತಾಂಡಾ, ನರಸಪ್ಪ ದೇವತಗಲ್, ಗೋಪಾಲ ಪೂಜಾರಿ, ಗಂಗಣ್ಣ, ರಮೇಶ ಇದ್ದರು.