ದೇವದುರ್ಗ: ದೇವದುರ್ಗ ಪೊಲೀಸ್ ಠಾಣೆ ಪಿಐ ಎಸ್.ಮಂಜುನಾಥ ಹಾಗೂ ಸಂಚಾರ ಠಾಣೆ ಪಿಎಸ್‌ಐ ನಾರಾಯಣ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಯಾವುದೇ ಕಾರಣಕ್ಕೂ ಅವರನ್ನು ವರ್ಗಾವಣೆ ಮಾಡಬಾರದೆಂದು ಒತ್ತಾಯಿಸಿ ರಾಯಚೂರಿನಲ್ಲಿ ಎಸ್ಪಿ ಪುಟ್ಟಮಾದಯ್ಯಗೆ ವಿವಿಧ ಸಂಘಟನೆ ಮುಖಂಡರು ಮಂಗಳವಾರ ಮನವಿ ಸಲ್ಲಿಸಿದರು.
ಪಿಐ ಮಂಜುನಾಥ ಅಧಿಕಾರವಹಿಸಿಕೊಂಡ ನಂತರ ಮರಳು ಅಕ್ರಮ ದಂಧೆಗೆ ಕಡಿವಾಣ ಬಿದ್ದಿದೆ. ಮಟ್ಕಾ ಹಾವಳಿ ಕೂಡ ಕಡಿಮೆಯಾಗಿದೆ. ಅಕ್ರಮ ಚಟುವಟಿಕೆಗಳ ಮೇಲೆ ದಾಳಿ ನಡೆಯುತ್ತಿದೆ. ಸಂಚಾರ ಠಾಣೆ ಪಿಎಸ್‌ಐ ನಾರಾಯಣ ಅವರು, ಕೋರ್ಟ್ ನಿರ್ದೇಶನದಂತೆ ಕರ್ತವ್ಯ ನಿರ್ವಹಿಸುತ್ತಿದ್ದು, ಬೈಕ್ ಸವಾರರ ದಾಖಲೆ, ಹೆಲ್ಮೆಟ್ ತಪಾಸಣೆ ನಡೆಸುತ್ತಿದ್ದಾರೆ. ಕುಡಿದು ವಾಹನ ಚಲಾವಣೆ ನಿಯಂತ್ರಣಕ್ಕೆ ಬಂದಿದೆ. ಇದರಿಂದ ಕುಟುಂಬಗಳಿಗೆ ಧೈರ್ಯ ಬಂದಂತಾಗಿದೆ ಎಂದರು.
ಅಕ್ರಮ ದಂಧೆಗೆ ಬ್ರೇಕ್ ಹಾಕಿದ್ದರಿಂದ ಕೆಲ ಜನಪ್ರತಿನಿಧಿಗಳು ಹಾಗೂ ಬೆಂಬಲಿಗರ ಆಟಕ್ಕೆ ಕಡಿವಾಣ ಬಿದ್ದಿದ್ದು, ಇಬ್ಬರ ವಿರುದ್ಧ ಇಲ್ಲಸಲ್ಲದ ಆರೋಪ ಕೇಳಿಬರುತ್ತಿವೆ. ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇಬ್ಬರು ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡಲು ಬಿಡಬೇಕು. ಅವರಿಗೆ ಆತ್ಮವಿಶ್ವಾಸ ತುಂಬಬೇಕು. ವರ್ಗಾವಣೆ ಮಾಡಿದರೆ ಹೋರಾಟ ನಡೆಸಲಾಗುವುದು ಎಂದರು. ಪ್ರಮುಖರಾದ ಮಾನಪ್ಪ ಮೇಸ್ತ್ರಿ, ಹನುಮಂತ ಮನ್ನಾಪುರ, ಮೋಹನ್ ಬಲ್ಲಿದವ್, ವಿಶ್ವನಾಥ ಬಲ್ಲಿದವ್, ಕ್ರಾಂತಿಕುಮಾರ, ಮಹಾಂತೇಶ ಭವಾನಿ, ಮೌನೇಶ, ದುರುಗಪ್ಪ, ದೇವಣ್ಣ, ಆಂಜನೇಯ, ವೆಂಕನಗೌಡ ವಕೀಲ, ಪ್ರದೀಪ್ ರಾಠೋಡ್ ಇದ್ದರು.