

ನೀರಾವರಿ ಕಚೇರಿ ಎದುರು ಪ್ರತಿಭಟನೆ ನಾಳೆ
ದೇವದುರ್ಗ: ನಾರಾಯಣಪುರ ಬಲದಂಡೆ ನಾಲೆ ಕೊನೇ ಭಾಗದ ರೈತರ ಜಮೀನಿಗೆ ನೀರು ಮುಟ್ಟಿಸಲು ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಉಪಕಾಲುವೆಗಳ ನವೀಕರಣ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಒತ್ತಾಯಿಸಿ ತಾಲೂಕಿನ ಅಮರಾಪುರದ ನೀರಾವರಿ ಇಲಾಖೆ ಕಚೇರಿ ಎದುರು ಜ.24ರಂದು ಹೋರಾಟ ನಡೆಸಲಾಗುವುದು ಎಂದು ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ನರಸಣ್ಣ ನಾಯಕ ಹೇಳಿದರು.
ಕೇಂದ್ರ ಸರ್ಕಾರದ ಸುಮಾರು 1466 ಕೋಟಿ ರೂ ವೆಚ್ಚದಲ್ಲಿ ಎನ್‌ಆರ್‌ಬಿಸಿ ಉಪಕಾಲುವೆಗಳ ಮರು ನಿರ್ಮಾಣ ಕಾಮಗಾರಿ ಕೈ ಗೊಳ್ಳಲಾಗಿದೆ. ಕಾಮಗಾರಿಯು ಒಂದರಿಂದ 18 ಉಪ ಕಾಲುವೆ ವ್ಯಾಪ್ತಿಯಲ್ಲಿ ನಡೆಯುತ್ತಿದೆ. ಆದರೆ ಬಹುತೇಕ ಕಾಮಗಾರಿ ಅಂದಾಜುಪಟ್ಟಿ ಪ್ರಕಾರ ನಡೆಯದೆ, ತರಾತುರಿಯಲ್ಲಿ ಕಳಪೆಯಾಗಿ ಮಾಡಲಾಗುತ್ತಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕೆಲ ತಿಂಗಳ ಹಿಂದೆ ಜಾಲಹಳ್ಳಿ ವ್ಯಾಪ್ತಿಯ ಹೊಸೂರು ಸಿದ್ದಾಪುರ ಗ್ರಾಮದ ಬಳಿ 9ನೇ ಉಪ ಕಾಲುವೆಯ ತಳ ಭಾಗದಲ್ಲಿ ಸಮರ್ಪಕ ಸಿಮೆಂಟ್ ಹಾಕದ ಕಾರಣ ನೀರಿನ ಸೆಳೆತಕ್ಕೆ ಕುಸಿದಿತ್ತು. ಈಗ ಹೊರಟಗೆರಿ ಅಡವಿಯಲ್ಲಿ ಕೈಗೊಂಡ ನಾಲೆ ಸುಮಾರು 60 ಮೀಟರ್ ಬಿರುಕು ಬಿಟ್ಟಿದೆ. ಕಳಪೆ ಮರೆಮಾಚಲು ಅಧಿಕಾರಿಗಳು ಕೂಲಿ ಕಾರ್ಮಿಕರಿಂದ ತೇಪೆ ಹಚ್ಚುವ ಕೆಲಸ ಮಾಡಿಸುತ್ತಿದ್ದಾರೆ. ಕಾಮಗಾರಿ ಗುಣಮಟ್ಟದ್ದಾಗಿದ್ದರೆ ಬಿರುಕು ಬಿಡುತ್ತಿರಲಿಲ್ಲ. ಹಲವು ಸಲ ರೈತರು ಪ್ರತಿಭಟನೆ ಮಾಡಿದರೂ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಿವಿಗೆ ಹಾಕಿಕೊಂಡಿಲ್ಲ ಎಂದು ಆರೋಪಿಸಿದರು. ಸಿಪಿಐಎಂ ಮುಖಂಡ ಗಿರಿಯಪ್ಪ ಪೂಜಾರಿ ಇದ್ದರು.