ಕಾಮಗಾರಿ ತಾತ್ಕಾಲಿಕ ಸ್ಥಗಿತಗೊಳಿಸಿ, ಮುಖ್ಯಇಂಜಿನಿಯರ್ ಅಶೋಕ ಸೂಚನೆ

28012022 Devadurga Canal water stop
Published on

ನೀರು ಬಂದ್ ನಂತರ ಕೆಲಸ ಮಾಡಿ

ದೇವದುರ್ಗ: ನಾರಾಯಣಪುರ ಬಲದಂಡೆ ನಾಲೆಯ ಉಪಕಾಲುವೆಗಳ ನವೀಕರಣ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತ ಮಾಡಿ. ನಾಲೆಗೆ ನೀರು ಬಂದ್ ಮಾಡಿದ ನಂತರ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ಕೃಷ್ಣಾ ಭಾಗ್ಯ ಜಲನಿಗಮದ ಮುಖ್ಯ ಇಂಜಿನಿಯರ್ ಅಶೋಕ ವಾಸನದ್ ಸೂಚಿಸಿದರು.

ಜಾಲಹಳ್ಳಿ ಸಮೀಪ ಹೊಸೂರು ಸಿದ್ದಾಪುರ ಗ್ರಾಮದ ಒಂಬತ್ತನೇ ಉಪಕಾಲುವೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಕಾಮಗಾರಿ ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲ. ನೀರು ಬಿಡುವ ಸಂದರ್ಭ ಕಾಮಗಾರಿ ಕೈಗೊಳ್ಳುವ ಅಗತ್ಯವೇನಿದೆ ? ನಾಲೆಗೆ ನೀರು ಬಂದ್ ಮಾಡಿದ ನಂತರ ನವೀಕರಣ ಕಾಮಗಾರಿ ಕೈಗೊಳ್ಳಬೇಕು ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ತಾಕೀತು ಮಾಡಿದರು.

ತಾತ್ಕಾಲಿಕವಾಗಿ ಕೆಲಸ ನಿಲ್ಲಿಸಿ, ನೀರು ಬಂದ್ ಆದ ನಂತರ ಕೆಲಸ ಆರಂಭಿಸಬೇಕು. ನಿಯಮಪ್ರಕಾರ ಕಾಮಗಾರಿ ಕೈಗೊಳ್ಳಬೇಕು. ಕೆಲಸ ನಡೆಯುವ ಸಂದರ್ಭ ಸಂಬಂಧಿತ ಅಧಿಕಾರಿಗಳು ಸ್ಥಳದಲ್ಲಿದ್ದು, ಪರಿಶೀಲಿಸಬೇಕು. ಗುಣಮಟ್ಟದಲ್ಲಿ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಇಂಜಿನಿಯರ್‌ಗಳಿಗೆ ಸೂಚಿಸಿದರು.

ಉಪಕಾಲುವೆ ಒಂಬತ್ತನೇ ವಿಭಾಗದಲ್ಲಿ ಕಳಪೆ ಕಾಮಗಾರಿ ಕೈಗೊಂಡಿದ್ದರಿಂದ ನಾಲೆ ಬಿರುಕುಬಿಟ್ಟಿದೆ ಎಂದು ಆರೋಪಿಸಿ ಅಮರಾಪುರದ ಕೆಬಿಜೆಎನ್‌ಎಲ್ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿದ್ದರು. ಈ ಬಗ್ಗೆ ವಿಜಯವಾಣಿ ಪತ್ರಿಕೆಯು ನವೀಕರಣ ಕಾಮಗಾರಿ ಕಳಪೆ ಬಗ್ಗೆ ಹಲವು ಸಲ ಸುದ್ದಿಮಾಡಿ ಗಮನ ಸೆಳೆದಿತ್ತು. ಕೆಪಿಸಿಸಿ ವಕ್ತಾರ ಹನುಮಂತಪ್ಪ ಆಲ್ಕೋಡ್ ಇತ್ತೀಚೆಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಈ ಹಿನ್ನೆಲೆ ಅಧಿಕಾರಿಗಳ ತಂಡ ಭೇಟಿ ನೀಡಿದೆ. ಅಧೀಕ್ಷಕರ ಇಂಜಿನಿಯರ್ ಶಂಕರ ನಾಯಕ ರಾಠೋಡ್, ಎಇಇ ಮಹಾಲಿಂಗಪ್ಪ ಭಜಂತ್ರಿ, ಇಂಜಿನಿಯರ್ ಶ್ರೀಧರ್ ಬಲ್ಲಿದವ್, ಆನಂದ ಚವ್ಹಾಣ್, ಸಂತೋಷ ಪಾಟೀಲ್, ನರೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net