ಕೃಷ್ಣಾ ತಟದಲ್ಲಿ ಪ್ರವಾಹದ ಆತಂಕ

07082020 Devadurga Krishna flood
Published on

ಡ್ಯಾಂನಿಂದ 1.82ಲಕ್ಷ ಕ್ಯೂಸೆಕ್ ನೀರು ಬಿಡುಗಡೆ, ಸೇತುವೆ, ದೇವಸ್ಥಾನ ಮುಳುಗಡೆ ಭೀತಿ

ದೇವದುರ್ಗ: ಮಹಾರಾಷ್ಟ್ರ ಸೇರಿ ಕೃಷ್ಣಾ ಮೇಲ್ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಅಪಾರ ನೀರು ಹರಿದುಬರುತ್ತಿದೆ. ನಾರಾಯಣಪುರ ಜಲಾಶಯದ 7ಕ್ರಸ್ಟ್ ಗೇಟ್‌ಗಳ ಮೂಲಕ ಕೃಷ್ಣಾ ನದಿಗೆ ಶುಕ್ರವಾರ ಬೆಳಗ್ಗೆ 1.82ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದೆ.

ದಿನೇದಿನೆ ನದಿಗೆ ಹೆಚ್ಚಿನ ನೀರು ಬರುತ್ತಿರುವುದರಿಂದ ನದಿದಂಡೆ ಗ್ರಾಮಗಳ ಜನರಲ್ಲಿ ನೆರೆಹಾವಳಿ ಭೀತಿ ಶುರುವಾಗಿದೆ. ಹೂವಿನಹೆಡಗಿ ಸೇತುವೆಗೆ ತಾಕಿ ನೀರು ಹರಿಯುತ್ತಿದ್ದು, ಮುಂಜಾಗ್ರತೆಯಿಂದ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ. ಪಟ್ಟಣದ ಜೆಪಿ ಸರ್ಕಲ್‌ನಲ್ಲಿ ಬ್ಯಾರೀಕೆಡ್ ಹಾಕಿದ್ದು, ಹೂವಿನಹೆಡಗಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಹೂವಿನಹೆಡಗಿ ಶ್ರೀಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದೆ. ಕೊಪ್ಪರದ ಶ್ರೀಲಕ್ಷ್ಮೀ ನರಸಿಂಹ ದೇವಸ್ಥಾನದ ಮೆಟ್ಟಿಲುವರೆಗೆ ನೀರು ಬಂದಿದ್ದು, ದೇವಾಲಯ ಸುತ್ತುವರಿಯುವ ಭೀತಿಯಿದೆ. ಗೂಗಲ್‌ನ ಶ್ರೀಅಲ್ಲಮಪ್ರಭು ದೇವಸ್ಥಾನ ಸಮೀಪಕ್ಕೆ ನೀರು ಬಂದಿದ್ದು, ನೀರು ಹೆಚ್ಚಳವಾದರೆ ಬ್ರಿಡ್ಜ್ ಕಂ ಬ್ಯಾರೇಜ್ ಕೂಡ ಮುಳುಗುವ ಸಾಧ್ಯತೆ ಇದೆ.

ತಿಂಥಣಿ ಬ್ರಿಡ್ಜ್‌ನ ಕಾಗಿನೆಲೆ ಗುರುಪೀಠ, ಅಡವಿಲಿಂಗೇಶ್ವರ ದೇವಸ್ಥಾನ ಹಾಗೂ ಮೌನೇಶ್ವರ ದೇವಸ್ಥಾನದ ಸಮೀಪಕ್ಕೆ ನೀರು ಬಂದಿದ್ದು, ಭಕ್ತರ ದರ್ಶನ ಸ್ಥಗಿತಗೊಳಿಸಲಾಗಿದೆ. ಸದ್ಯ ನಾರಾಯಣಪುರ ಜಲಾಶಯದಲ್ಲಿ 26.5ಟಿಎಂಸಿ ಅಡಿ ನೀರಿನ ಸಂಗ್ರಹವಿದ್ದು, ಆಲಮಟ್ಟಿಯಿಂದ ಹೊರಬರುವ 1.70ಲಕ್ಷ ಹಾಗೂ ಮಲಪ್ರಭಾದಿಂದ ಬರುವ 6ಸಾವಿರ ಸೇರಿ 1.82ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ನಾರಾಯಣಪುರ ಜಲಾಶಯದ ಎಇಇ ರಾಮನಗೌಡ ಹಳ್ಳೂರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net