ದೇವದುರ್ಗ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ 21ರಂದು ನಿಗದಿ

17032020 Devadurga Muncipal Office
Published on

ದೇವದುರ್ಗ: ಸ್ಥಳೀಯ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಕೋರ್ಟ್ ಮೀಸಲು ಪ್ರಕಟಿಸಿದ ಹಿನ್ನೆಲೆಯಲ್ಲಿ ಚುನಾವಣೆ ಆಯೋಗ ಮತದಾನ ದಿನ ಘೋಷಣೆ ಮಾಡಿದ್ದು, ಮಾ.21ರಂದು ಚುನಾವಣೆ ನಡೆಯಲಿದೆ ಎಂದು ತಾಲೂಕು ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಮಧುರಾಜ್ ಕೂಡಲಗಿ ತಿಳಿಸಿದ್ದಾರೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಸ್ಥಳೀಯ ಪುರಸಭೆ ಕಚೇರಿಯಲ್ಲಿ ಅಂದು ಬೆಳಗ್ಗೆ 10ರಿಂದ 11ರವರೆಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಸಮಯ ನಿಗದಿ ಮಾಡಲಾಗಿದೆ. ಮಧ್ಯಾಹ್ನ 1ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದೆ. ನಂತರ 1ರಿಂದ 1.10ರವರೆಗೆ ನಾಮಪತ್ರ ಹಿಂಪಡೆಯಲು ಸಮಯ ನಿಗದಿ ಮಾಡಲಾಗಿದೆ. ಅವಶ್ಯವಿದ್ದಲ್ಲಿ ಮಧ್ಯಾಹ್ನ 1.30ಕ್ಕೆ ಮತದಾನ ನಡೆಯಲಿದೆ. ನಂತರ ಒಂದಕ್ಕಿಂತ ಹೆಚ್ಚಿನ ನಾಮಪತ್ರಗಳು ಸಲ್ಲಿಕೆಯಾದರೆ ಕೈ ಎತ್ತುವ ಮೂಲಕ ಮತದಾನ ನಡೆಸಿ, ಫಲಿತಾಂಶ ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ವದಂತಿ: ಸ್ಥಳೀಯ ಸಂಸ್ಥೆ ಚುನಾವಣೆ ಮೀಸಲು ಸಂಬಂಧ ಕೆಲ ಪಕ್ಷ ನಾಯಕರು ಕೋರ್ಟ್ ಮೊರೆ ಹೋಗಿದ್ದು, ತಡೆಯಾಜ್ಞೆ ಬೀಳಲಿದೆ ಎನ್ನುವ ವದಂತಿ ತಾಲೂಕಿನಲ್ಲಿ ಹರಡಿದೆ. ಇದರಿಂದ ಕುತೂಹಲ ಹೆಚ್ಚಾಗಿದ್ದು, ಪುರಸಭೆ ಸದಸ್ಯರಿಗೆ ಆತಂಕ ಮನೆಮಾಡಿದೆ. ‘ಸಾಮಾಜಿಕ ಜಾಲತಾಣದಲ್ಲಿ ಬರುವ ಸುದ್ದಿಗಳಿಗೆ ಜನರು ಕಿವಿಗೊಡಬಾರದು. ಚುನಾವಣೆ ರದ್ದಾದ ಬಗ್ಗೆ ಅಥವಾ ಮುಂದೂಡಿರುವ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಯಿಂದ ಯಾವುದೇ ಆದೇಶ ಬಂದಿಲ್ಲ. ನಿಗದಿಯಂತೆ 21ರಂದು ಚುನಾವಣೆ ನಡೆಯಲಿದೆ ಎಂದು ತಹಸೀಲ್ದಾರ್ ಮಧುರಾಜ್ ಹಾಗೂ ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ತಿಳಿಸಿದ್ದಾರೆ.

ಮಾನ್ವಿ ಪುರಸಭೆ ಅಧ್ಯಕ್ಷ ಚುನಾವಣೆ 26ಕ್ಕೆ ಫಿಕ್ಸ್

ಮಾನ್ವಿ : ಪಟ್ಟಣದ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಮಾ.26 ರಂದು ಜರುಗಲಿದೆ ಎಂದು ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಅಮರೇಶ ಬಿರದಾರ್ ಘೋಷಿಸಿದ್ದಾರೆ. ಒಟ್ಟು 27 ಸದಸ್ಯರ ಸ್ಥಾನ ಹೊಂದಿರುವ ಪುರಸಭೆಗೆ ಅಧ್ಯಕ್ಷ ಸ್ಥಾನ ಬಿಸಿಎ (ಮಹಿಳೆ) ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ (ಮಹಿಳೆ)ಗೆ ಮೀಸಲಾಗಿದೆ. 26ರಂದು ಬೆಳಗ್ಗೆ 10ರಿಂದ 11ರ ವರೆಗೆ ನಾಮಪತ್ರ ಸಲ್ಲಿಸಬಹುದು. ಮಧ್ಯಾಹ್ನ 1 ರಿಂದ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಂತರ 10 ನಿಮಿಷ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ನಾಮಪತ್ರಗಳು ಹಿಂದಕ್ಕೆ ಪಡೆಯದಿದ್ದರೆ ಕೈ ಎತ್ತುವ ಮೂಲಕ ಅಧ್ಯಕ್ಷ ಸ್ಥಾನದ ಚುನಾವಣೆ ನಂತರ ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ನಡೆಸಲಾಗುವುದು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net