

ದೇವದುರ್ಗ: ಕೃಷಿಯಲ್ಲಿ ತಂತ್ರಜ್ಞಾನ ಬಳಕೆ ದಿನೇ ದಿನೆ ಹೆಚ್ಚಾಗುತ್ತಿದ್ದು, ಇದರಿಂದ ರೈತರಿಗೆ ಅನೇಕ ರೀತಿಯಲ್ಲಿ ಉಪಯೋಗ ಆಗುತ್ತಿದೆ. ತೋಟಗಾರಿಕೆ ಬೆಳೆಗಳಲ್ಲಿ ಪ್ಲಾಸ್ಟಿಕ್ ತಂತ್ರಜ್ಞಾನ ಬಳಕೆ ರೈತ ಸ್ನೇಹಿಯಾಗಿದೆ ಎಂದು ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ರಮೇಶ ಹೇಳಿದರು.
ಮುಕ್ಕನಾಳ ಗ್ರಾಮಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೃಷಿ ರಚನೆ ಮತ್ತು ಪರಿಸರ ನಿರ್ವಹಣೆಯಲ್ಲಿ ಪ್ಲಾಸ್ಟಿಕ್ ತಂತ್ರಜ್ಞಾನದ ಅಖಿಲ ಭಾರತ ಸಂಶೋಧನಾ ಯೋಜನೆ, ಸಮೂಹ ಸಂಸ್ಥೆಯಿಂದ ಆಯೋಜಿಸಿದ್ದ ತೋಟಗಾರಿಕೆ ಬೆಳೆಗಳಲ್ಲಿ ಪ್ಲಾಸ್ಟಿಕ್ ತಂತ್ರಜ್ಞಾನದ ಬಳಕೆ ಮತ್ತು ಉಪಯೋಗ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.
ತೋಟಗಾರಿಕೆ ಬೆಳೆಗಳಲ್ಲಿ ನೀರು ಹಾಗೂ ಕಳೆ ನಿರ್ವಹಣೆಯಲ್ಲಿ ಪ್ಲಾಸ್ಟಿಕ್ ತಂತ್ರಜ್ಞಾನ ಬಳಕೆ ಲಾಭದಾಯಕವಾಗಿದೆ. ಬೆಳೆಗಳಿಗೆ ಪ್ಲಾಸ್ಟಿಕ್ ಹೊದಿಕೆಯಿಂದ ತಾಪಮಾನ ಮತ್ತು ತೇವಾಂಶದ ಏರಿಳಿತವನ್ನು ನಿಯಂತ್ರಿಸಬಹುದು. ಕೀಟ ಮತ್ತು ರೋಗಗಳ ಹಾವಳಿಯನ್ನು ತಡೆಯಲು ಪ್ಲಾಸ್ಟಿಕ್ ಸಹಾಯ ಮಾಡುತ್ತದೆ ಎಂದು ಡಾ.ರಮೇಶ ತಿಳಿಸಿದರು.
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ.ದೇವೇಂದ್ರ ಬೀರಲದಿನ್ನಿ ಮಾತನಾಡಿ, ಪ್ಲಾಸ್ಟಿಕ್ ಹೊದಿಕೆಯಿಂದ ಭೂಮಿಯಲ್ಲಿರುವ ಪೋಷಕಾಂಶಗಳನ್ನು ಸಮಗ್ರವಾಗಿ ಉಪಯೋಗಿಸಿ ಹೆಚ್ಚಿನ ಇಳುವರಿ ಪಡೆಯಬಹುದು ಹಾಗೂ ಮಣ್ಣಿನ ಸವೆತವನ್ನು ಕೂಡ ಕಡಿಮೆ ಮಾಡಬಹುದು. ಹೀಗಾಗಿ ರೈತರು ಇಂಥ ತಂತ್ರಜ್ಞಾನ ಬಳಸಿ ಕೃಷಿಮಾಡಬಹುದು ಎಂದರು. ಕೀಟಶಾಸ್ತ್ರ ವಿಜ್ಞಾನಿ ಡಾ.ಕೃಷ್ಣ ಬಿರಾದಾರ್ ಪಾಟೀಲ್, ಸಮೂಹ ಸಂಸ್ಥೆ ಅಧಿಕಾರಿ ಮುದರಂಗಪ್ಪ, ಸಿಬ್ಬಂದಿ ಜೋಸ್ನಾ, ರವಿಕುಮಾರ್, ರೈತರು ಭಾಗವಹಿಸಿದ್ದರು.