

ದೇವದುರ್ಗ: ಶಕ್ತಿ ಯೋಜನೆಯಿಂದ ನಷ್ಟದಲ್ಲಿದ್ದ ಸಾರಿಗೆ ಸಂಸ್ಥೆಗೆ ಸರ್ಕಾರದಿಂದ ಅನುದಾನ ಬರಲಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ನೌಕರರು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕು ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.
ಪಟ್ಟಣದ ಸಾರಿಗೆ ಸಂಸ್ಥೆ ಬಸ್ ಡಿಪೋದಲ್ಲಿ ದೇವದುರ್ಗ-ಗಾಣಗಾಪುರ ಮಾರ್ಗದ ಹೊಸ ಬಸ್ ಸಂಚಾರಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು. ಸಾರಿಗೆ ಸಂಸ್ಥೆ ಹಲವು ವರ್ಷಗಳಿಂದ ನಷ್ಟದಲ್ಲಿ ನರಳುತ್ತಿತ್ತು. ಹಳೇ ಬಸ್‌ಗಳು, ರೂಟ್ ಸೇರಿ ಸಾರಿಗೆ ಸಂಸ್ಥೆ ನೌಕರರಿಗೆ ಹಲವು ಸಮಸ್ಯೆಗಳು ಕಡುತ್ತಿವೆ. ಇವರ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕಿದೆ ಎಂದರು.
ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ನೌಕರರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ನೌಕರರ ಸೇವೆ ಶ್ಲಾಘನೀಯ. ಅಫಜಲ್‌ಪುರ ತಾಲೂಕಿನ ಗಾಣಗಾಪುರದಲ್ಲಿನ ಐತಿಹಾಸಿಕ ದೇವಸ್ಥಾನಕ್ಕೆ ಈ ಭಾಗದ ಜನರು ಅತಿ ಹೆಚ್ಚು ಪ್ರಯಾಣಿಸುತ್ತಿದ್ದ ಹಿನ್ನೆಲೆ ಅವರ ಅನುಕೂಲಕ್ಕಾಗಿ ಹೊಸ ಮಾರ್ಗವನ್ನು ಪ್ರಾರಂಭಿಸಲಾಗಿದೆ ಎಂದರು.
ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ನಾಗರಾಜ ಪಾಟೀಲ್, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಮಯೂರಸ್ವಾಮಿ, ಶಮಿನಾ ಉದ್ದಾರ್, ಇಸಾಕ್ ಮೇಸ್ತ್ರಿ, ಮಹೇಶಗೌಡ ಕಾಕರಗಲ್, ದಾವುದ್ ಔಂಟಿ ಇತರರಿದ್ದರು.