ಒಣಮೆಣಸಿನಕಾಯಿಗೆ ಬೆಂಬಲ ಬೆಲೆ ನೀಡಿ

Untitled design (21)
Published on

ದೇವದುರ್ಗ: ಒಣ ಮೆಣಸಿನಕಾಯಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಪಟ್ಟಣದ ತಾಲೂಕು ಕಚೇರಿ ಶಿರಸ್ತೇದಾರ್ ವೆಂಕಟೇಶಗೆ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಬಣ) ಮಂಗಳವಾರ ಮನವಿ ಸಲ್ಲಿಸಿತು.

ನಾರಾಯಣಪುರ ಬಲದಂಡೆ ನಾಲೆ ಹಾಗೂ ಕೃಷ್ಣಾ ನದಿ ನೀರು ನಂಬಿಕೊಂಡು ಸಾವಿರಾರು ಹೆಕ್ಟೇರ್‌ನಲ್ಲಿ ಮೆಣಸಿನಕಾಯಿ ಬೆಳೆಯಲಾಗಿದೆ. ಎಕರೆಗೆ 75 ರಿಂದ ಒಂದು ಲಕ್ಷ ರೂ. ಖರ್ಚು ಮಾಡಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 9-12 ಸಾವಿರ ರೂ. ಬೆಲೆಯಿದೆ. ಇದರಿಂದ ರೈತರಿಗೆ ಭಾರಿ ನಷ್ಟ ತರಲಿದೆ. ಬಹುತೇಕ ರೈತರು ರಸಗೊಬ್ಬರ, ಬಿತ್ತನೆ ಬೀಜ, ಕ್ರಿಮಿನಾಶಕ ಅಂಗಡಿಗಳಲ್ಲಿ ಬಡ್ಡಿಗೆ ಉದ್ರಿ ಪಡೆದಿದ್ದಾರೆ. ಬೆಳೆ ಕೈಗೆ ಬಂದಿದ್ದು ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ. ಅಂಗಡಿಗಳಲ್ಲಿ ಉದ್ರಿಗೆ ಪಡೆದ ವಸ್ತುಗಳಿಗೆ ಬಡ್ಡಿ ಬೆಳೆಯುತ್ತಿದೆ ಎಂದು ದೂರಿದರು. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಂಬಲ ಬೆಲೆಯೊಂದಿಗೆ ಹೋಬಳಿಗೊಂದು ಖರೀದಿ ಕೇಂದ್ರ ತೆರೆಯಬೇಕು. ಕ್ವಿಂಟಾಲ್‌ಗೆ ಕನಿಷ್ಠ 25 ಸಾವಿರ ರೂ. ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ತಾಲೂಕು ಅಧ್ಯಕ್ಷ ಮರಿಲಿಂಗ ಪಾಟೀಲ್ ಗೌರಂಪೇಟೆ, ಉಪಾಧ್ಯಕ್ಷ ತಿಮ್ಮನಗೌಡ ಗೌರಂಪೇಟೆ, ಬಸವರಾಜ ಸ್ವಾಮಿ, ಮಾರುತಿ ನಾಯಕ, ಚಂದ್ರು ನಾಯಕ, ಬಸವ ಹೂಗಾರ, ಶರಣು, ಸಿದ್ದಪ್ಪ ದೊರೆ, ರಮೇಶ ದೊರೆ, ಉದಯಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net