ತೇವಾಂಶ ಕೊರತೆಯಿಂದ ಭತ್ತಕ್ಕೆ ರೋಗ

Untitled design (6)
ಮಂಡಲಗುಡ್ಡ ಗ್ರಾಮಕ್ಕೆ ರಾಯಚೂರು ವಿವಿಯ ವಿಜ್ಞಾನಿಗಳ ತಂಡ ಭೇಟಿ ನೀಡಿ ಭತ್ತದ ಬೆಳೆ ಪರಿಶೀಲಿಸಿತು. ಪ್ರಾಧ್ಯಾಪಕ ಡಾ.ಅಮರೇಗೌಡ, ಕೃಷಿ ವಿಜ್ಞಾನಿ ಡಾ.ಆನಂದ ಕಾಂಬಳೆ, ಡಾ.ಡಿ.ಎಸ್.ಅಶ್ವಥ್ ನಾರಾಯಣ, ತಾಲೂಕು ಕೃಷಿ ಸಹಾಯಕ ಅಧಿಕಾರಿ ಶ್ರೀನಿವಾಸ ಇತರರಿದ್ದರು.
Published on

ದೇವದುರ್ಗ: ತಾಲೂಕಿನ ಮಂಡಲಗುಡ್ಡ ಗ್ರಾಮಕ್ಕೆ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ.ಅಮರೇಗೌಡ ನೇತೃತ್ವದ ವಿಜ್ಞಾನಿಗಳ ತಂಡ ಗುರುವಾರ ಭೇಟಿ ನೀಡಿ, ಭತ್ತದ ಬೆಳೆ ಪರೀಶಿಲನೆ ನಡೆಸಿತು.

ಭತ್ತ ಬೆಳೆ ಕಡಿಮೆಯಾಗಿ ರೋಗದ ಪ್ರಭಾವ ಹೆಚ್ಚಳ

ಮಂಡಲಗುಡ್ಡ ರೈತ ಹನುಮಂತಪ್ಪ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿತು. ಡಾ.ಅಮರೇಗೌಡ ಮಾತನಾಡಿ, ತೇವಾಂಶ ಕೊರತೆ ಹಾಗೂ ನೀರಿನ ಅಭಾವದಿಂದ ಭತ್ತದ ಬೆಳೆಗೆ ರೋಗ ಕಾಣಿಸಿಕೊಳ್ಳುತ್ತಿದೆ. ನಾರಾಯಣಪುರ ಬಲದಂಡೆ ನಾಲೆಗೆ ನೀರು ಬಂದ್ ಆಗಿರುವ ಕಾರಣ ಬಹುತೇಕ ರೈತರು ಭತ್ತ ಬೆಳೆದಿಲ್ಲ. ನೀರಿನ ಲಭ್ಯತೆ ಇರುವವರು, ನದಿಪಾತ್ರದ ರೈತರು ಭತ್ತ ಬೆಳೆದಿದ್ದಾರೆ. ಇದರಿಂದ ಭತ್ತ ಬೆಳೆ ಕಡಿಮೆಯಾಗಿ ರೋಗದ ಪ್ರಭಾವ ಹೆಚ್ಚಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಹೇಳಿದರು.

ಗ್ರಾಮದಲ್ಲಿ ಸುಮಾರು 50 ಎಕರೆ ಪ್ರದೇಶದಲ್ಲಿ ಸಮಸ್ಯೆಯಾಗಿದೆ. ಹಿಂಗಾರು ಬೆಳೆಗೆ ನಾರಾಯಣಪುರ ಬಲದಂಡೆ ಕಾಲುವೆ ನೀರು ಸ್ಥಗಿತವಾಗಿದೆ. ರೈತರು ಹಳ್ಳದ ನೀರು ಪಡೆದುಕೊಂಡು ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಜಮೀನು ಸವಳು-ಜವಳು ಭೂಮಿಯಾಗಿದ್ದು, 15 ವಷರ್ಗಳಿಂದ ನಿರಂತರವಾಗಿ ನೀರು ಜಮೀನಲ್ಲಿ ನಿಲ್ಲಿಸಿ ಭತ್ತ ಬೆಳೆಯಲಾಗಿದೆ. ಅದರೆ, ಪ್ರಸಕ್ತ ವರ್ಷ ಕಾಲುವೆ ನೀರು ಸ್ಥಗಿತ ಮಾಡಿರುವುದರಿಂದ ನೀರಿನ ಕೊರತೆ ಉಂಟಾಗಿದೆ. ರಸಾಯನಿಕ ಗೊಬ್ಬರ ಬಳಕೆ ಮಾಡಲಾಗಿದೆ. ಅಲ್ಲದೇ ಜಮೀನಲ್ಲಿ ಸುಣ್ಣದ ಪ್ರಮಾಣ ಹೆಚ್ಚಾಗಿದೆ. ಈ ಜಮೀನಲ್ಲಿ ಉಂಟಾಗಿರುವ ಸಮಸ್ಯೆಯ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ತಂಡದ ಅಧಿಕಾರಿಗಳು ತಿಳಿಸಿದರು.

ಕೃಷಿ ವಿಜ್ಞಾನಿ ಡಾ.ಆನಂದ ಕಾಂಬಳೆ, ಡಾ.ಡಿ.ಎಸ್.ಅಶ್ವಥ್ ನಾರಾಯಣ ನೇತೃತ್ವದಲ್ಲಿ ತಂಡ ವಿವಿಧ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿತು. ತಾಲೂಕು ಕೃಷಿ ಸಹಾಯಕ ಅಧಿಕಾರಿ ಶ್ರೀನಿವಾಸ, ರೈತರಾದ ಹನುಮಂತ ಪೂಜಾರಿ, ಶಿವರಾಜ, ನಾಗರಾಜ, ಶಿವಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net