

ದೇವದುರ್ಗ: ಕೇತ್ರದಲ್ಲಿ 2019ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮತದಾನ ಪ್ರಮಾಣ ಶೇ.2ರಷ್ಟು ಕುಸಿದಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ.63.27 ಮತದಾನವಾಗಿತ್ತು. ಈ ಬಾರಿ ಶೇ.61.85ರಷ್ಟು ವೋಟಿಂಗ್ ಆಗಿದೆ. ತಾಲೂಕಿನಲ್ಲಿ 2,39,293 ಮತದಾರರಲ್ಲಿ 75,593 ಪುರುಷರು, 72, 409 ಮಹಿಳೆಯರು, 3 ಇತರರು ಸೇರಿ 1,48,005 ಮತದಾರರು ಹಕ್ಕು ಚಲಾಯಿಸಿದ್ದಾರೆ. ಕಳೆದ 2023ರ ವಿಧಾನಸಭೆ ಚುನಾವಣೆಯಲ್ಲಿ 1,75,562 ಮತದಾರರು ಮತದಾನ ಮಾಡಿದ್ದು ಶೇ.74.60 ಮತದಾನವಾಗಿತ್ತು. ಕಳೆದ ಎರಡು ಚುನಾವಣೆಗಿಂತ ಈ ವರ್ಷ ಕಡಿಮೆ ಮತದಾನವಾಗಿದೆ.
ಬರದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ರೈತರು, ಕೂಲಿಕಾರರು ನಾಲ್ಕೈದು ತಿಂಗಳಿನಿಂದ ಬೆಂಗಳೂರು, ಪುಣೆಗೆ ಗುಳೆಹೋಗಿದ್ದೆ ಮತದಾನ ಕಡಿಮೆಯಾಗಲು ಕಾರಣವಾಗಿದೆ. ಮೊದಲಿನಿಂದ ಈ ಭಾಗದ ತಾಂಡಾ, ದೊಡ್ಡಿಯ ಜನರು ಗುಳೆ ಹೋಗುತ್ತಿದ್ದು, ಈ ವರ್ಷ ಬರಗಾಲ ಹಾಗೂ ನಾರಾಯಣಪುರ ಬಲದಂಡೆ ನಾಲೆಗೆ ನೀರು ಬಾರದ ಕಾರಣ ಕೃಷಿ ಚಟುವಟಿಕೆಗಳು ಸ್ಥಗಿತವಾಗಿವೆ. ಹೀಗಾಗಿ ಗ್ರಾಮೀಣ ಭಾಗದ ಬಹುತೇಕ ಜನರು ಹೋಗಿದ್ದಾರೆ. ಅಲ್ಲದೆ ಪಕ್ಷಗಳಲ್ಲಿ ಪ್ರಚಾರ ಕೊರತೆ ಕಾರಣವಾಗಿರಬಹುದು.