

ದೇವದುರ್ಗ : ಲಾಕ್‌ಡೌನ್ ಉಲ್ಲಂಘಿಸಿ ಮನೆಯಿಂದ ಹೊರಗಡೆ ಬಂದ ವಾಹನ ಸವಾರರು ಹಾಗೂ ಚಾಲಕರನ್ನು ತಾಲೂಕಿನ ಪೊಲೀಸರು ಭರ್ಜರಿ ಭೇಟಿಯಾಡಿದ್ದು, 25 ದಿನಗಳಲ್ಲಿ ಮೊಟಾರು ವಾಹನ ಕಾಯ್ದೆಯಡಿ ಬರೊಬ್ಬರಿ 600ಕ್ಕೂ ಹೆಚ್ಚು ಕೇಸ್ ದಾಖಲಿಸಿದ್ದಾರೆ.
ಕರೊನಾ ತಡೆಗೆ ಮನೆಯಲ್ಲೇ ಇರಿ ಎಂದು ಅಧಿಕಾರಿಗಳು ಹಾಗೂ ಪೊಲೀಸರು ಸಲಹೆ ಸೂಚನೆ ನೀಡಿದ್ದರೂ ಕ್ಯಾರೆ ಎನ್ನದ ಜನರಿಗೆ ಲಾಠಿ ರುಚಿ ಜತೆಗೆ ಕೇಸ್ ಉಡುಗೊರೆಯಾಗಿ ದೊರೆಯುತ್ತಿದೆ.
ನಿಯಮ ಮೀರಿ ಹೊರಬಂದ ಬೈಕ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಲಾಕ್‌ಡೌನ್ ಉಲ್ಲಂಘಿಸಿದ ವಾಹನಗಳ ಮಾಲೀಕರ ವಿರುದ್ಧ ತಾಲೂಕಿನ ವಿವಿಧ ಠಾಣೆಗಳಲ್ಲಿ ಮೋಟಾರು ವಾಹನ ಕಾಯ್ದೆಯಡಿ 600 ಪ್ರಕರಣಗಳನ್ನು ದಾಖಲಿಸಿಕೊಂಡು ಸುಮಾರು 1.95 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.
ಸಿಪಿಐ ಕಚೇರಿಯಿಂದ 220, ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 160, ಜಾಲಹಳ್ಳಿ ಠಾಣೆ ವ್ಯಾಪ್ತಿಯಲ್ಲಿ 90, ಗಬ್ಬೂರು ಠಾಣೆ ವ್ಯಾಪ್ತಿಯಲ್ಲಿ 130 ಪ್ರಕರಣಗಳನ್ನು ದಾಖಲಿಸಿಕೊಂಡು 275 ವಿವಿಧ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಎರಡನೇ ಹಂತದ ಲಾಕ್‌ಡೌನ್ ಮತ್ತಷ್ಟು ಕಠಿಣ ಮಾಡಲಾಗಿದೆ.
ಅಬಕಾರಿ ಪ್ರಕರಣಗಳು : ನಿಷೇಧಾಜ್ಞೆ ನಡುವೆ ಅಕ್ರಮವಾಗಿ ಮದ್ಯ ಮತ್ತು ಬಟ್ಟಿ ಸಾರಾಯಿ ತಯಾರಿಸಿ ಮಾರಾಟ ಮಾಡುತ್ತಿರುವವರ ವಿರುದ್ಧವೂ ನಿರಂತರವಾಗಿ ದಾಳಿ ನಡೆಯುತ್ತಿದೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ 3, ಜಾಲಹಳ್ಳಿ ಠಾಣೆ ವ್ಯಾಪ್ತಿಯಲ್ಲಿ 2 ಪ್ರಕರಣಗಳನ್ನು ದಾಖಲಿಸಿ ಒಟ್ಟು 24 ಆರೋಪಿಗಳ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ.