

ಆಟೋ ಚಾಲಕರು, ಮಹಿಳೆಯರಿಗೆ ವರ್ಕ್
ದೇವದುರ್ಗ: ಲಾಕ್‌ಡೌನ್‌ನಿಂದ ಉದ್ಯೋಗವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದ ಕೂಲಿಕಾರರಿಗೆ ಶಾಸಕ ಕೆ.ಶಿವನಗೌಡ ನಾಯಕ ಅನ್ನ ದಾಸೋಹ ಕೇಂದ್ರ ವರದಾನವಾಗಿದ್ದು, ನಿತ್ಯ 300ಕ್ಕೂ ಹೆಚ್ಚು ಜನರಿಗೆ ಪ್ರತ್ಯಕ್ಷ, ಪರೋಕ್ಷವಾಗಿ ಉದ್ಯೋಗ ದೊರತಿದೆ.
ಆಟೋ ಚಾಲಕರಿಗೆ ಬ್ಯಾಂಕ್ ಸಾಲದಕಂತಿನ ಹಣ ತುಂಬಲೂ ಕಷ್ಟವಾಗಿತ್ತು. ಅನ್ನದಾಸೋಹ ಕೇಂದ್ರದಿಂದ ಗ್ರಾಮೀಣ ಭಾಗಕ್ಕೆ ಈ ಆಟೋಗಳು ಊಟ ಹಾಗೂ ಕುಡಿವ ನೀರು ಸರಬರಾಜು ಮಾಡುತ್ತಿದ್ದು, ಉದ್ಯೋಗ ದೊರೆತಂತಾಗಿದೆ. ವಿವಿಧ ವಲಯದಲ್ಲಿ ಕೂಲಿಮಾಡಿ ಜೀವನ ನಡೆಸುತ್ತಿದ್ದ ಮಹಿಳೆಯರು, ಕೂಲಿಕಾರರಿಗೆ ಕೆಎಸ್‌ಎನ್ ನಿತ್ಯದ ಕೂಲಿ ಆಧಾರದಲ್ಲಿ ಕೆಲಸ ನೀಡಿದೆ. ಮಹಿಳೆಯರಿಗೆ ಅನುಕೂಲವಾಗಿದ್ದು, ಬೆಳಗ್ಗೆ 7ರಿಂದ ಮಧ್ಯಾಹ್ನ 2ರವರೆಗೆ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ ಅಡುಗೆ ಭಟ್ಟರು, ಟೆಂಟ್ ಬಾಡಿಗೆದಾರರು, ಕುಡಿವ ನೀರಿನ ಘಟಕ, ತರಕಾರಿ ಸೇರಿ ವಿವಿಧ ಸ್ತರದ ಜನರಿಗೂ ಪರೋಕ್ಷವಾಗಿ ಉದ್ಯೋಗ ದೊರೆತಂತಾಗಿದೆ.
ದಾಸೋಹ ಕೇಂದ್ರದಲ್ಲಿ ನಿತ್ಯ 300ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದು, 150ಕ್ಕೂ ಹೆಚ್ಚು ಸ್ವಯಂ ಸೇವಕರು, ಕೆಎಸ್‌ಎನ್ ಅಭಿಮಾನಿಗಳು ದುಡಿಯುತ್ತಿದ್ದಾರೆ. ಅದರಲ್ಲಿ 150ಕ್ಕೂ ಹೆಚ್ಚು ಮಹಿಳೆಯರಿದ್ದು, ವಿವಿಧ ಹಂತದ ಕೆಲಸದ ಮೇಲೆ ಕೂಲಿ ನೀಡಲಾಗುತ್ತಿದೆ. ನಿರುದ್ಯೋಗಿ ಯುವಕರು ಕೂಡ ಶಿಬಿರದಲ್ಲಿ ಕೆಲಸ ಮಾಡಿ, ಜೀವನ ನಡೆಸುತ್ತಿದ್ದಾರೆ. ನಿರುದ್ಯೋಗಿಗಳಿಗೆ ಲಾಕ್‌ಡೌನ್‌ನಲ್ಲಿ ಕೆಲಸ ದೊರೆತಂತಾಗಿದೆ.
ಲಾಕ್‌ಡೌನ್‌ನಲ್ಲಿ ಅನುಕೂಲ: ನಿತ್ಯ 40ಸಾವಿರಕ್ಕೂ ಹೆಚ್ಚು ಊಟದ ಪಾರ್ಸಲ್ ಮಾಡಲಾಗುತ್ತಿದ್ದು, ಇವುಗಳನ್ನು ಪ್ಯಾಕ್ ಮಾಡಲು ಮಹಿಳೆಯರ ತಂಡವನ್ನು ನಿಯೋಜಿಸಲಾಗಿದೆ. ಸ್ವಚ್ಛತೆಗೊಳಿಸಲು, ತರಕಾರಿ ಹೆಚ್ಚಲು, ಅಡುಗೆ ಸಹಾಯಕರಾಗಿ 150 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಇವರಿಗೆ ಎರಡು ಹೊತ್ತಿನ ಊಟದ ಜತೆ ದಿನಕ್ಕೆ 200ರೂ. ಕೂಲಿ ನೀಡಲಾಗುತ್ತಿದೆ. ಪ್ಯಾಕಿಂಗ್ ಸೇರಿ ವಿವಿಧ ಕೆಲಸ ಮಾಡುವ ಪುರುಷರಿಗೆ 350ರೂ. ಕೂಲಿಯಿದೆ. ಪಾತ್ರೆ ತೊಡೆಯುವ ಮಹಿಳೆಯರಿಗೆ 400ರೂ., ಪುರುಷರಿಗೆ 500ರೂ., ಅಡುಗೆ ಭಟ್ಟರಿಗೆ ವಿಶೇಷ ಪ್ಯಾಕೇಜ್ ನೀಡಲಾಗಿದೆ. ಒಟ್ಟಿನಲ್ಲಿ ಲಾಕ್‌ಡೌನ್‌ನಲ್ಲಿ ಕೆಲಸವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದ ಜನರಿಗೆ ಕೆಎಸ್‌ಎನ್ ದಾಸೋಹ ಕೇಂದ್ರ ಉದ್ಯೋಗ ನೀಡಿದೆ.
ಲಾಕ್‌ಡೌನ್‌ನಲ್ಲಿ ಜನರ ಸಂಕಷ್ಟ ನೋಡಿ ಅನ್ನ ದಾಸೋಹ ಕೇಂದ್ರ ತೆರೆಯಲಾಗಿದೆ. ಈ ಶಿಬಿರದಿಂದ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಬಡವರು, ಕೂಲಿಕಾರರು, ಯುವಕರಿಗೆ 2 ತಿಂಗಳ ಕಾಲ ಉದ್ಯೋಗ ದೊರೆತಿದೆ. ಆಟೋ ಚಾಲಕರಿಗೂ ಬಾಡಿಗೆ ನೀಡಲಾಗುತ್ತಿದೆ. ಸುಮಾರು 300ಜನ ಕೆಲಸ ಮಾಡುತ್ತಿದ್ದಾರೆ.| ಕೆ.ಶಿವನಗೌಡ ನಾಯಕ ಶಾಸಕರು