

ದೇವದುರ್ಗ: ದೇವರ ನಾಡು, ದೇವತೆಗಳ ಬೀಡು ಹಾಗೂ ದೊರೆಗಳ ನಾಡು ಎಂದು ಕರೆಸಿಕೊಳ್ಳುವ ದೇವದುರ್ಗ ತಾಲೂಕು ಕವಿಗಳ ನಾಡಾಗಿ ಬದಲಾಗಬೇಕಿದೆ. ಈ ನಿಟ್ಟಿನಲ್ಲಿ ಕಸಾಪ ತಾಲೂಕು ಶ್ರಮಿಸಬೇಕು ಎಂದು ಶಾಸಕ ಕೆ.ಶಿವನಗೌಡ ನಾಯಕ ಹೇಳಿದರು.
ಪಟ್ಟಣದ ಖೇಣೇದ್ ಮುರಿಗೆಪ್ಪ ಫಂಕ್ಷನ್ ಹಾಲ್‌ನಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಯಚಟುವಟಿಕೆಗಳ ಉದ್ಘಾಟನೆ ಸಮಾರಂಭ ಉದ್ಘಾಟಿಸಿ ಶನಿವಾರ ಮಾತನಾಡಿದರು. ನಾನು ತಾಪಂ ಸದಸ್ಯನಾಗಿದ್ದಾಗ 2000ರಿಂದ ಕಸಾಪದಲ್ಲಿ ಕೆಲಸ ಮಾಡಿದ್ದೇನೆ. ಕಸಾಪ ಇಂದು ಸಾಹಿತ್ಯದ ಜತೆಗೆ ನಾಡು ನುಡಿ ಉಳಿಸುವ ಕೆಲಸ ಮಾಡುತ್ತಿದೆ. ಎಲೆಮರೆ ಕಾಯಿಯಂತಿರುವ ಯುವ ಸಾಹಿತಿಗಳನ್ನು ಪರಿಚಯಿಸುವ ಕೆಲಸ ಮಾಡಬೇಕು ಎಂದರು.
2000ರ ನಂತರದಲ್ಲಿ ಈ ಭಾಗದಲ್ಲಿ ಕಸಾಪ ಸಕ್ರಿಯವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. 22 ವರ್ಷಗಳಿಂದ ಸಾಹಿತ್ಯ ಪರ, ನಾಡು, ನುಡಿಗಳ ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡುತ್ತಿದೆ. ಈ ಭಾಗದಲ್ಲಿ ಅನೇಕ ಸಾಹಿತಿಗಳು, ಕಲಾವಿದರಿದ್ದು, ಅವರನ್ನು ಗುರಿಸುವ ಕೆಲಸ ಮಾಡಬೇಕಿದೆ. ತಾಲೂಕಿನಲ್ಲಿ ಶಾಂತಿ, ಪ್ರೀತಿ, ವಿಶ್ವಾಸದಿಂದ ಸಾಹಿತ್ಯದ ತೇರು ಎಳೆಯಬೇಕು.
ಚುನಾವಣೆ ಮುಗಿದ ನಂತರ ಎಲ್ಲರೂ ಕನ್ನಡಮ್ಮ ಮಕ್ಕಳಾಗಿ ಕಸಾಪ ಬೆಳೆಸಲು ಶ್ರಮಿಸಬೇಕಿದೆ. ತಾಲೂಕಿನಲ್ಲಿ ಸಾಹಿತ್ಯ ಚಟುವಟಿಕೆಗಳು ದೊಡ್ಡ ಪ್ರಮಾಣದಲ್ಲಿ ಹಮ್ಮಿಕೊಳ್ಳಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಶಾಸಕ ಶಿವನಗೌಡ ನಾಯಕ ಹೇಳಿದರು.