ಶುದ್ಧ ಕುಡಿವ ನೀರಿನ ಘಟಕಗಳು ಸ್ತಬ್ಧ

Published on

ದೇವದುರ್ಗ: ತಾಲೂಕು ಕೃಷ್ಣಾ ನದಿಗೆ ಹೊಂದಿಕೊಂಡಿದ್ದರೂ ಜನರ ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಶುದ್ಧ ಕುಡಿವ ನೀರಿನ ಘಟಕಗಳು ಸಂಖ್ಯೆಗೆ ಸೀಮಿತವಾಗಿದ್ದು, ಬಳಕೆಗೆ ಉಪಯೋಗವಿಲ್ಲದಂತಾಗಿದೆ. ಬಹುತೇಕ ಘಟಕಗಳಿಗೆ ಗ್ರಹಣ ಹಿಡಿದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮೂಕಪ್ರೇಕ್ಷಕರಂತೆ ವರ್ತಿಸುತ್ತಿದ್ದಾರೆ.

ತಾಲೂಕಿನಲ್ಲಿ 146 ಶುದ್ಧ ಕುಡಿವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. 91ಪ್ಲಾಂಟ್ ಸುಸ್ಥಿತಿಯಲ್ಲಿದ್ದರೆ, 55 ಘಟಕಗಳು ನಾನಾ ಕಾರಣದಿಂದ ಬಂದ್ ಆಗಿವೆ. 18 ಘಟಕಗಳು ಆರಂಭವಾಗಿ 10ರಿಂದ 12ವರ್ಷವಾಗಿರುವುದರಿಂದ ಕಾರ್ಯನಿರ್ವಹಣೆ ಸ್ಥಗಿತಗೊಂಡಿದೆ.

ಕೆಕೆಆರ್‌ಡಿಬಿಯಿಂದ ಪ್ರತಿ ವರ್ಷ 10ರಿಂದ 12 ಹೊಸ ಶುದ್ಧ ಕುಡಿವ ನೀರಿನ ಘಟಕ ಸ್ಥಾಪಿಸಲಾಗುತ್ತಿದೆ. ಆಲ್ಕೋಡ್, ಗಲಗ, ಭೂಮನಗುಂಡ, ಕುರ್ಕಿಹಳ್ಳಿ, ಮಾನಸಗಲ್, ನೀಲವಂಜಿ, ಗಣಜಲಿ, ಹೊನ್ನಟಗಿ ಗ್ರಾಮಗಳಲ್ಲಿ ಹೊಸ ಆರ್‌ಒ ಪ್ಲಾಂಟ್ ಆರಂಭಿಸಿದ್ದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ.
ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ದೇವದುರ್ಗದಲ್ಲಿ ಸರ್ಕಾರದ ಶುದ್ಧ ಕುಡಿವ ನೀರಿನ ಘಟಕವಿಲ್ಲ. ಪುರಸಭೆಯಿಂದ ಪ್ಲಾಂಟ್ ಸ್ಥಾಪಿಸಿದರೂ ನಿರ್ವಹಣೆ ಕೊರತೆಯಿಂದ ಬಂದ್‌ಆಗಿವೆ. 10ಕ್ಕೂ ಹೆಚ್ಚು ಖಾಸಗಿ ಆರ್‌ಒ ಪ್ಲಾಂಟ್‌ಗಳಿದ್ದು, ಅವುಗಳೇ ಜನರಿಗೆ ಶುದ್ಧ ಕುಡಿವ ನೀರು ಒದಗಿಸುತ್ತಿವೆ. ಜನರು 20 ಲೀಟರ್ ಕ್ಯಾನ್‌ಗೆ 10, 15, 20 ರೂ. ನೀಡಿ ಖಾಸಗಿ ಪ್ಲಾಂಟ್‌ಗಳಿಂದ ನೀರು ಖರೀದಿ ಮಾಡುತ್ತಿದ್ದಾರೆ.

ನಾರಾಯಣಪುರ ಬಲದಂಡೆ ನಾಲೆ ಕೊನೇ ಭಾಗ, ತಾಂಡಾ, ದೊಡ್ಡಿಗಳಲ್ಲಿ ನೀರಿನ ಅಭಾವವಿದೆ. ಸೋಮನಮರಡಿ, ಹೇಮನಾಳ, ಊಟಿ, ಪಲಕನಮರಡಿ, ಕ್ಯಾದಿಗೇರಾ, ಆಲ್ಕೋಡ್, ಸಲಿಕ್ಯಾಪುರ, ಚಿಕ್ಕಬೂದೂರು, ಜೇರಬಂಡಿ, ಎಚ್.ಸಿದ್ದಾಪುರ, ವಂದಲಿ, ಹೊನ್ನಟಗಿ ಸೇರಿ ವಿವಿಧೆಡೆ ಕುಡಿವ ನೀರಿನ ಬವಣೆಯಿದೆ.

ವಂದಲಿ, ಊಟಿ, ಸುಣ್ಣದಕಲ್, ಬಿ.ಗಣೇಕಲ್, ಸೋಮನಮರಡಿ, ಎಚ್.ಸಿದ್ದಾಪುರ ಸೇರಿ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿನಲ್ಲಿ ಆರ್ಸೆನಿಕ್ ಹಾಗೂ ಫ್ಲೋರೈಡ್ ಅಂಶ ಹೆಚ್ಚಾಗಿದೆ. ಪ್ಲೋರೈಡ್ ಅಂಶದ ನೀರು ಕುಡಿದರೆ ಮೊಣಕಾಲು, ಕೀಲು ಬೇನೆ, ಕಂದು ಹಲ್ಲಿನ ಸಮಸ್ಯೆ ಸೇರಿ ಆರೋಗ್ಯ ಮೇಲೆ ದುಷ್ಪರಿಣಾಮ ಕಂಡುಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net