

ದೇವದುರ್ಗ: ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸಾಹಿತ್ಯ ಕ್ಷೇತ್ರ ಬೆಳವಣಿಗೆಯಲ್ಲಿ ಮಾಧ್ಯಮ ಪಾತ್ರ ಬಹುಮುಖ್ಯವಾಗಿದ್ದು, ಎರಡು ಒಂದೇ ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಅಭಿಪ್ರಾಯಪಟ್ಟರು.
ಪಟ್ಟಣದ ಮಿನಿವಿಧಾನಸೌಧ ಪಕ್ಕದಲ್ಲಿ ನೂತನವಾಗಿ ಆರಂಭಿಸಲಾದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಕಚೇರಿ ಉದ್ಘಾಟನೆ ಹಾಗೂ ಸನ್ಮಾನ ಸಮಾರಂಭದಲ್ಲಿ ಶನಿವಾರ ಮಾತನಾಡಿದರು. ಮಾತೃ ಭಾಷೆಯಲ್ಲಿ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯ. ಕನ್ನಡ ಭಾಷೆ ಬೆಳವಣಿಗೆಗೆ ಯುವ ಜನತೆ ಮುಂದಾಗಬೇಕು. ದೇಶದಲ್ಲಿ ಶೇ.3.5ರಷ್ಟು ಜನರು ಕನ್ನಡ ಮಾತನಾಡಿದರೆ, ಶೇ.7ರಷ್ಟು ಜನರು ತಮಿಳು, ಶೇ.9 ತೆಲುಗು ಹಾಗೂ ಶೇ.54ರಂದು ಹಿಂದಿ ಮಾತನಾಡುತ್ತಾರೆ. ರಾಜ್ಯದಲ್ಲಿ 7ಕೋಟಿ ಕನ್ನಡಿಗರು ಇದ್ದರೂ ಸಾಹಿತ್ಯ ಪರಿಷತ್‌ನಲ್ಲಿ 3.5ಸದಸ್ಯರಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್‌ನ ಸದಸ್ಯರ ಸಂಖ್ಯೆ 1.5ಕೋಟಿ ಸದಸ್ಯತ್ವ ಗುರಿ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ಸದಸ್ಯತ್ವ ಶುಲ್ಕ 500ರಿಂದ 250ರೂ.ಗೆ ಇಳಿಸಲಾಗಿದೆ. 2022ರ ಫೆ.6ರಿಂದ ಕಾಗಿನೆಲೆಯಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಎಲ್ಲ ಪತ್ರಕರ್ತರು ಸದಸ್ಯತ್ವ ಪಡೆಯಬೇಕು. ಕನ್ನಡ ನಾಡು ನುಡಿ ರಕ್ಷಣೆಗೆ ಎಲ್ಲರ ಸಹಕಾರ ಅಗತ್ಯ. ಈ ಹಿನ್ನೆಲೆ ಯುವಕರು ಹೆಚ್ಚಿನ ಕಾಳಜಿವಹಿಸಬೇಕು ಎಂದರು.
ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಬಸನಗೌಡ ದೇಸಾಯಿ ಮಾತನಾಡಿ, 2022ರ ಜನವರಿ 3, 4ರಂದು ಕಲಬುರಗಿಯಲ್ಲಿ ಪತ್ರಕರ್ತರ ರಾಜ್ಯ ಮಟ್ಟದ ಸಮ್ಮೇಳನ ಆಯೋಜಿಸಲಾಗಿದೆ. ಸಭೆಯಲ್ಲಿ ಭಾಗವಹಿಸುವ ಆಸಕ್ತ ಪತ್ರಕರ್ತರು ಆನ್‌ಲೈನ್ ಇಲ್ಲವೆ, ಸಂಘದಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಹಾಗೂ ಕನ್ನಡ ವಿವಿ ಸಿಂಡಿಕೇಟ್ ಸದಸ್ಯ ಶರಣಗೌಡ ಸುಂಕೇಶ್ವರಹಾಳಗೆ ಸನ್ಮಾನಿಸಲಾಯಿತು. ಸಂಘದ ಕಾರ್ಯದರ್ಶಿ ಬಾಬುಅಲಿ ಕರಿಗುಡ್ಡ, ಜಿಲ್ಲಾ ಉಪಾಧ್ಯಕ್ಷ ಸೂಗುರೇಶ ಗುಡಿ, ವೆಂಕಟೇಶ ನಿಲಗಲ್, ಗಿರಿಯಪ್ಪ ಪೂಜಾರಿ, ಅಲಿಬಾಬ ಪಟೇಲ್ ಇದ್ದರು.