

ದೇವದುರ್ಗ: ಪರಿಶಿಷ್ಟ ಪಂಗಡದ ನಿರುಪಾದಿ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಮಸ್ಕಿ ಠಾಣೆ ಪಿಎಸ್‌ಐ ಮಣಿಕಂಠರನ್ನು ಬಂಧಿಸುವಂತೆ ಒತ್ತಾಯಿಸಿ ಇಲ್ಲಿನ ಮಿನಿವಿಧಾನಸೌಧ ಮುಂದೆ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿದರು.
ಟ್ರ್ಯಾಕ್ಟರ್‌ನಲ್ಲಿ ಜಮೀನಿಗಾಗಿ ಮರಂ ತೆಗೆದುಕೊಂಡು ಹೋಗುತ್ತಿದ್ದ ನಿರುಪಾದಿ ಮೇಲೆ ಪಿಎಸ್‌ಐ ಮನಬಂದಂತೆ ಥಳಿಸಿ, ಜಾತಿ ನಿಂದನೆ ಮಾಡಿದ್ದಾರೆ. ಇದರಿಂದ ನಿರುಪಾದಿ ತೀವ್ರ ಅಸ್ವಸ್ಥಗೊಂಡು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಗಂಭೀರವಾಗಿ ನಡೆದ್ದಿರೂ ವರಿಷ್ಠಾಧಿಕಾರಿ ಮೌನಕ್ಕೆ ಜಾರಿರುವುದು ಖಂಡನೀಯ. ಕೂಡಲೇ ಮಣಿಕಂಠರನ್ನು ಬಂಧಿಸಬೇಕು. ಇಂಥ ಘಟನೆಗಳು ನಡೆಯುದಂತೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ಮಾನಸಯ್ಯ ನಾಯಕ, ಮುಖಂಡರಾದ ಭೀಮಣ್ಣ ಗೋಸಲ್, ಕೆ.ವಿನೋದ ನಾಯಕ, ಬೂದಯ್ಯ, ರಂಗಪ್ಪ ಗೋಸಲ್, ಬಸವರಾಜ ಮಸ್ಕಿ, ಹನುಂತ್ರಾಯ ನಾಯಕ, ಹನುಮೇಶ ನಾಯಕ, ಪ್ರಭುರಾಯ ದೊರೆ, ರಾಮಣ್ಣ ನಾಯಕ, ಕೆಂಚಣ್ಣ ಪೂಜಾರಿ, ತಿರುಪತಿ ನಾಯಕ ಗಲಗ, ಬುಡ್ಡಯ್ಯ ನಾಯಕ, ನಿಜಲಿಂಗಪ್ಪ ಕೋಣಚಪ್ಪಳಿ, ರಮೇಶನಾಯಕ, ಶಂಕರಗೌಡ ಪಾಟೀಲ್ ಇತರರಿದ್ದರು.