

ದೇವದುರ್ಗ: ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು ಗೀತೆಗಳನ್ನು ಹಾಡಿದರು. ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಮಾತನಾಡಿ, ಕನ್ನಡ ಅತ್ಯಂತ ಶ್ರೇಷ್ಠ ಹಾಗೂ ಪ್ರಾಚೀನ ಭಾಷೆಯಾಗಿದೆ. ಸಾಹಿತಿಗಳು, ಶರಣರು, ದಾಸರು ವಿಭಿನ್ನ ಶೈಲಿಯಲ್ಲಿ ಕಾವ್ಯ, ಸಾಹಿತ್ಯ, ವಚನಗಳನ್ನು ರಚಿಸಿ ಕನ್ನಡ ನಾಡಿಗೆ ಕೊಡುಗೆ ನೀಡಿದ್ದಾರೆ. ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ, ವಿ.ಕೃ.ಗೋಕಾಕ್, ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ್ ಕಂಬಾರ್ ಚನ್ನವೀರ ಕಣವಿ, ಜಿ.ಎಸ್.ಶಿವರುದ್ರಪ್ಪ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದರು.