

ದೇವದುರ್ಗ: ಪಟ್ಟಣದ 23 ವಾರ್ಡ್‌ಗಳಿಗೆ ರಸ್ತೆಬದಿ ವಿದ್ಯುತ್ ಕಂಬ ಅಳವಡಿಸಿ ಬೀದಿದೀಪಗಳನ್ನು ಹಾಕುವಂತೆ ಒತ್ತಾಯಿಸಿ ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯಗೆ ಜಯ ಕರ್ನಾಟಕ ಸಂಘಟನೆ ಮುಖಂಡರು ಗುರುವಾರ ಮನವಿ ಸಲ್ಲಿಸಿದರು.
ಪಟ್ಟಣದ ಜಹಿರುದ್ದೀನ್ ಪಾಷಾ ಸರ್ಕಲ್‌ನಿಂದ ಗೌರಂಪೇಟೆಯ ವಾಲ್ಮೀಕಿ ವೃತ್ತದವರೆಗೆ ರಾಜ್ಯ ಹೆದ್ದಾರಿಯ ಎರಡೂ ಬದಿಯ ವಿದ್ಯುತ್ ಕಂಬಗಳಿಗೆ ದೀಪಗಳೇ ಇಲ್ಲ. ಇದರಿಂದ ರಾತ್ರಿ ವೇಳೆ ಪಾದಚಾರಿಗಳು, ವಾಹನ ಸವಾರರ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ರಸ್ತೆ ಮಧ್ಯದಲ್ಲಿ ಹಂಪ್ಸ್‌ಗಳಿರುವುದರಿಂದ ಕತ್ತಲಲ್ಲಿ ವಾಹನಗಳು ಮುಗುಚಿ ಬಿದ್ದಿವೆ. ಕೆಲ ಕಡೆ ಅಪಘಾತ ಸಂಭವಿಸಿವೆ.
ಇದಲ್ಲದೆ ಜೆಪಿ ವೃತ್ತದಿಂದ ಹಳೇ ಬಸ್ ನಿಲ್ದಾಣ, ಸಾರ್ವಜನಿಕ ಆಸ್ಪತ್ರೆ, ಬಸವೇಶ್ವರ ವೃತ್ತ, ಮಹಾತ್ಮಗಾಂಧಿ ವೃತ್ತ ಮತ್ತಿತರೆಡೆ ವಿದ್ಯುತ್ ದೀಪಗಳ ಕೊರತೆಯಿದೆ. ಹಂಪ್ಸ್‌ಗಳಿಗೆ ರೇಡಿಯಂ ಹಾಕದ ಕಾರಣ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಕತ್ತಲಿನಲ್ಲಿ ಮಹಿಳೆಯರು, ಮಕ್ಕಳ ಓಡಾಡಲು ಭಯಪಡುವಂತಾಗಿದೆ. ಮಳೆಗಾಲವಾದ್ದರಿಂದ ಹಾವು, ಚೇಳುಗಳ ಹಾವಳಿ ಹೆಚ್ಚಾಗಿದೆ ಎಂದು ದೂರಿದರು.
ಕೂಡಲೇ ರಾಜ್ಯ ಹೆದ್ದಾರಿಯ ಎರಡೂ ಬದಿಗೆ ವಿದ್ಯುತ್ ಬೀದಿದೀಪ ಹಾಕಿ ಬೆಳಕಿನ ವ್ಯವಸ್ಥೆ ಮಾಡಬೇಕು. ಹಂಪ್ಸ್‌ಗಳಿಗೆ ರೇಡಿಯಂ ಅಂಟಿಸಿ ಅನಾಹುತ ತಪ್ಪಿಸಬೇಕು. ರಸ್ತೆ ಮೇಲೆ ಬಿಡಾಡಿ ದನಗಳ ಹಾವಳಿ ನಿಯಂತ್ರಿಸಬೇಕು. ನಿರ್ಲಕ್ಷ್ಯ ಮಾಡಿದರೆ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಉಪಾಧ್ಯಕ್ಷ ಕೃಷ್ಣಕುಮಾರ ಮಡಿವಾಳ, ತಾಲೂಕು ಗೌರವಾಧ್ಯಕ್ಷ ಸೋಫಿಸಾಬ್ ಉದ್ದಾರ್, ತಾಲೂಕು ಅಧ್ಯಕ್ಷ ಯಲ್ಲಗೌಡ ಕೆ.ಇರಬಗೇರಾ, ಮಾಧವರಾವ್ ಉಭಾಳೆ, ಆಂಜಿನೇಯ ನಾಯಕ ಗೌರಂಪೇಟೆ, ಕೇಶವಮೂರ್ತಿ ಉಭಾಳೆ, ಮುಸ್ತಾಫ್, ಸುನೀಲ್ ಕುಮಾರ, ವಿನೋದ ಕುಮಾರ, ಅಮರೇಶ್ ಚವಾಣ್, ರಂಗಯ್ಯ, ಶಿವಕುಮಾರ ಹಿರೇಮಠ, ಹನುಮಂತ್ರಾಯ ಬೊಮ್ಮನಾಳ, ಹೇಮರೆಡ್ಡಿ ಇತರರಿದ್ದರು.