ಸಮಗ್ರ ಕೃಷಿ ಅಳವಡಿಸಿಕೊಳ್ಳಲಿ- ಕೃಷಿ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಮರೆಡ್ಡಿ ಸಲಹೆ

241220 Devadurga Farmers Day
ದೇವದುರ್ಗದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ರೈತರ ದಿನಾಚರಣೆ ಹಾಗೂ ಕಿಸಾನ್ ಗೋಷ್ಠಿ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.
Published on

ದೇವದುರ್ಗ: ರೈತರು ಇಂದಿನ ಆಧುನಿಕ ಯುಗದಲ್ಲಿ ಸಾಂಪ್ರದಾಯಿಕ ಬೇಸಾಯಿ ಪದ್ಧತಿಗೆ ಜೋತುಬೀಳದೆ, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಉತ್ತಮ ಲಾಭ ಪಡೆಯಬೇಕು ಎಂದು ಕೃಷಿ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಜಿ.ಎನ್. ಮರಡಿ ಹೇಳಿದರು.

ಪಟ್ಟಣದ ಎಸ್‌ಬಿ ಕಲ್ಯಾಣ ಮಂಟಪದಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ರೈತರ ದಿನಾಚರಣೆ, ಕಿಸಾನ್ ಗೋಷ್ಠಿ ಹಾಗೂ ಸಾಧಕ ರೈತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ರೈತರು ತಮ್ಮ ಜಮೀನಿನ ಮಣ್ಣು ಪರೀಕ್ಷೆ ಮಾಡಿಸಬೇಕು. ಇದರಿಂದ ಯಾವ ಬೆಳೆ ಬಿತ್ತನೆ ಮಾಡಿದೆ ಉತ್ತಮ ಇಳುವರಿ ಪಡೆಯಬಹುದು ಎನ್ನುವ ಬಗ್ಗೆ ಮಾಹಿತಿ ಸಿಗಲಿದೆ. ಜತೆಗೆ ವಿವಿಧ ಬೆಳೆಗಳಲ್ಲಿ ಕಂಡುಬರುವ ಕೀಟಗಳ ನಿರ್ವಹಣೆಗೆ ರೈತರು ಕೃಷಿ ವಿಜ್ಞಾನಿಗಳ ಸಲಹೆ ಪಡೆಯಬೇಕು ಎಂದು ಹೇಳಿದರು.

ಸಹಾಯಕ ಕೃಷಿ ನಿರ್ದೇಶಕಿ ಡಾ.ಎಸ್.ಪ್ರಿಯಾಂಕಾ ಮಾತನಾಡಿ, ಸಾವಯವ ಕೃಷಿಯಿಂದ ರೈತರಿಗೆ ಕಡಿಮೆ ಖರ್ಚು ಹಾಗೂ ಅಧಿಕ ಲಾಭ ಪಡೆಯಬಹುದು. ಅತಿಯಾದ ರಸಗೊಬ್ಬರ, ಕ್ರಿಮಿನಾಶಕ ಬಳಕೆಯಿಂದ ಹೆಚ್ಚಿನ ಹೊರೆ ಬೀಳಲಿದೆ. ಈ ಬಗ್ಗೆ ರೈತರು ಗಮನ ಹರಿಸಬೇಕಿದೆ. ರೈತರೆ ತಮ್ಮ ಮೊಬೈಲ್ ಮೂಲಕ ಕೃಷಿ ಇಲಾಖೆ ಆ್ಯಪ್‌ನಲ್ಲಿ ಬೆಳೆ ಸಮೀಕ್ಷೆ ಮಾಡಿಕೊಳ್ಳಬಹುದು. ರೈತರ ಅನುಕೂಲಕ್ಕಾಗಿ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಸಾವಯವ ಕೃಷಿ ಮಹಿಳೆ ಶಾಂತಮ್ಮ ದೇವೇಂದ್ರಪ್ಪಗೌಡ, ಸಿರಿಧಾನ್ಯ ರೈತ ಸಿದ್ದಲಿಂಗಪ್ಪಗೌಡ, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡ ಬಸವರಾಜ ಶಾವಂತಗಲ್, ಬಸಯ್ಯ, ಹಬೀಬ್ ಪಾಷಾ ಗಲಗ ಇವರನ್ನು ಸನ್ಮಾನಿಸಲಾಯಿತು. ಕೃಷಿಕ ಸಮಾಜದ ಬಸವರಾಜ ಗಾಣಧಾಳ ಕಾರ್ಯಕ್ರಮ ಉದ್ಘಾಟಿಸಿದರು. ಸಮೂಹ ಸಂಸ್ಥೆ ಮುಖ್ಯಸ್ಥ ಎಸ್.ಎಸ್.ಘಂಟಿ, ಕೃಷಿ ವಿಜ್ಞಾನಿಗಳಾದ ಡಾ.ಟಿ.ಎಸ್.ಸುಮಾ, ಶ್ರೀನಿವಾಸ್, ಬಿ.ಎಸ್.ಚವ್ಹಾಣ್, ಎಸ್.ಎಲ್.ಕೊಂಡಗೂಳಿ, ಶ್ರೀಲತಾ, ಲಕ್ಷ್ಮಣ ಪೂಜಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net