ದೇವದುರ್ಗ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ

Untitled design(20)
Published on

ದೇವದುರ್ಗ: ಬೆಳಕಿನ ಹಬ್ಬ ದೀಪಾವಳಿ ಪಟ್ಟಣ ಸೇರಿ ತಾಲೂಕಾದ್ಯಂತ ಸಂಭ್ರಮ, ಸಡಗರ ತಂದಿದ್ದು, ಪಟ್ಟಣದ ಮಾರುಕಟ್ಟೆ ಹೂವು, ದೀಪ, ಹಣ್ಣುಗಳಿಂದ ಕಂಗೊಳಿಸುತ್ತಿದೆ. ದೀಪಾವಳಿ ಅಮಾವಾಸ್ಯೆ ನಿಮಿತ್ತ ಮಂಗಳವಾರ ಪೂಜಾ ಸಾಮಗ್ರಿ ಖರೀದಿ ಜೋರಾಗಿತ್ತು.

ಪಟ್ಟಣದ ಜೆಪಿ ವೃತ್ತದಿಂದ ಡಾ.ಅಂಬೇಡ್ಕರ್ ವೃತ್ತದವರೆಗೆ ವ್ಯಾಪಾರ ವಹಿವಾಟು ಜೋರಾಗಿ ನಡೆದಿದೆ. ಸೋಮವಾರ ನರಕ ಚತುರ್ಥಿಯಿಂದ ಮಾರುಕಟ್ಟೆಗೆ ವಿವಿಧ ವಸ್ತುಗಳು ಲಗ್ಗೆ ಇಟ್ಟಿವೆ. ರಸ್ತೆಯ ಎರಡೂ ಬದಿಗೆ ವಿವಿಧ ಹೂವಿನ ಸುವಾಸನೆ, ಬಾಳೆದಿಂಡು, ಚೆಂಡುಹೂವಿನ ಗಿಡ ಜನರನ್ನು ಆಕರ್ಷಣೆ ಮಾಡಿದರೆ, ಮಣ್ಣಿನ ದೀಪಗಳು, ಕುಂಬಳಕಾಯಿ, ವಿವಿಧ ಹಣ್ಣುಗಳು ಕೈಬೀಸಿ ಕರೆಯುತ್ತಿದ್ದವು.

ಮಾರುಕಟ್ಟೆಯಲ್ಲಿ ಮಹಿಳೆಯರು, ಮಕ್ಕಳು ಪೂಜಾ ಸಾಮಗ್ರಿ ಖರೀದಿಗೆ ಮುಗಿಬಿದ್ದಿದ್ದರು. ತೆಂಗಿನಕಾಯಿ, ಕುಂಬಳಕಾಯಿ, ಹೂವು, ಬಾಳೆದಿಂಡು, ಹಣ್ಣುಗಳ ಬೆಲೆ ಹೆಚ್ಚಾಗಿದ್ದರೂ ಜನರು ಖರೀದಿಗೆ ಹಿಂದೇಟು ಹಾಕಲಿಲ್ಲ. ಸ್ಥಳೀಯ ಕುಂಬಾರರು ಮಾಡಿದ ಮಣ್ಣಿನ ದೀಪಗಳ ಜತೆಗೆ ಪ್ಲಾಸ್ಟರ್‌ಆಫ್ ಪ್ಯಾರೀಸ್‌ನಿಂದ ತಯಾರಿಸಿದ ರಾಜಸ್ಥಾನ ಹಣತೆಗಳು ಆಷರ್ಕವಾಗಿದ್ದು, ಜನರು ಖರೀದಿಸಿದರು.

ಬಸ್ ನಿಲ್ದಾಣ ಮುಂಭಾಗ, ರಾಜ್ಯ ಹೆದ್ದಾರಿಯ ಎರಡೂ ಬದಿಗೆ ವ್ಯಾಪಾರಿಗಳು ಬಿಡಾರ ಹೂಡಿದ್ದು, ಭಾನುವಾರ ರಾತ್ರಿಯಿಂದಲೇ ಬೇರೆಬೇರೆ ಜಿಲ್ಲೆ ಹಾಗೂ ತಾಲೂಕಿನಿಂದ ಚೆಂಡುಹೂವು, ಬೂದು ಕುಂಬಳಕಾಯಿ, ಬಾಳೆದಿಂಡು ಆವಕ ಆಗಿದ್ದವು. ಎರಡು ದಿನಗಳಿಂದ ಮಾರುಕಟ್ಟೆ ಝಗಮಗಿಸುತಿದ್ದು ಜನರು ಕೂಡ ಉತ್ಸಾಹದಿಂದ ಖರೀದಿ ಮಾಡುವುದು ಕಂಡುಬಂದಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net