

ದೇವದುರ್ಗ: ಜಾಲಹಳ್ಳಿ ಸಮೀಪದ ಹೊಸೂರು ಸಿದ್ದಾಪುರ ಗ್ರಾಪಂ ದೇವದುರ್ಗ ತಾಲೂಕಿನಲ್ಲೇ ಉಳಿಯಲು ಗ್ರಾಮದ ಶ್ರೀ ಹನುಮಂತ ದೇವಸ್ಥಾನ ಕಟ್ಟೆ ಆವರಣದಲ್ಲಿ ಏರ್ಪಡಿಸಿದ್ದ ಗ್ರಾಮಸಭೆಯಲ್ಲಿ ಗುರುವಾರ ಒಮ್ಮತದಿಂದ ನಿರ್ಣಯ ಕೈಗೊಳ್ಳಲಾಯಿತು.
ತಾಲೂಕಿನ ಜನರ ಅಭಿಪ್ರಾಯ ಪಡೆಯದೆ 2021ರಲ್ಲಿ ಅರಕೇರಾ ನೂತನ ತಾಲೂಕು ರಚಿಸಲಾಗಿದೆ. ಹೊಸ ತಾಲೂಕಿಗೆ ಹೊಸೂರು ಸಿದ್ದಾಪುರ ಗ್ರಾಪಂ ವ್ಯಾಪ್ತಿಯ ಎಲ್ಲ ಹಳ್ಳಿಗಳನ್ನು ಸೇರಿಸಲಾಗಿದೆ. ಅರಕೇರಾಗೆ ಹೋಗಿಬರಲು ತೊಂದರೆಯಾಗುತ್ತದೆ. ಭೌಗೋಳಿಕವಾಗಿ ಹೊಸೂರು ಸಿದ್ದಾಪುರ ಜಾಲಹಳ್ಳಿಗೆ 1.5 ಕಿಮೀ ಅಂತರದಲ್ಲಿದೆ.
ಹೊಸ ತಾಲೂಕು ಗ್ರಾಮದಿಂದ 32 ಕಿಮೀ ದೂರವಿದೆ. ಆದರೆ ದೇವದುರ್ಗ ಕೇವಲ 18ಕಿಮೀ ದೂರವಿದ್ದು ಉತ್ತಮ ಸಾರಿಗೆ ಸಂಪರ್ಕ ವ್ಯವಸ್ಥೆಯಿದೆ. ರಾಜಕೀಯ ಉದ್ದೇಶಕ್ಕಾಗಿ ಅರಕೇರಾ ತಾಲೂಕು ರಚನೆ ಮಾಡಿದ್ದು ಅಲ್ಲಿ ಯಾವುದೇ ಸೌಲಭ್ಯಗಳಿಲ್ಲ. ಸಮರ್ಪಕ ಸಾರಿಗೆ, ಮೂಲಸೌಲಭ್ಯ, ಪೊಲೀಸ್ ಠಾಣೆ ಸೇರಿ ಅಗತ್ಯ ಇಲಾಖೆಗಳು ಇಲ್ಲ. ಅರಕೇರಾ ತಾಲೂಕು ರಚಿಸಬೇಕು ಎನ್ನುವ ಯಾವುದೇ ಬೇಡಿಕೆ, ಹೋರಾಟ ಇರಲಿಲ್ಲ. ಅಲ್ಲದೆ ಜನರ ಅಭಿಪ್ರಾಯ ಕೇಳದೆ ಹಿಂದಿನ ಸರ್ಕಾರ ತೀರ್ಮಾನಕೈಗೊಂಡು ಜನರಿಗೆ ಸಂಕಷ್ಟ ತಂದೊಡ್ಡಿದೆ. ಅರಕೇರಾ ತಾಲೂಕಿಗೆ ಸೇರಿ 17 ಗ್ರಾಪಂ ಜನರು ವಿವಿಧ ಸೌಲಭ್ಯಕ್ಕಾಗಿ ಸಿರವಾರ, ಮಾನ್ವಿ, ಲಿಂಗಸುಗೂರಿಗೆ ಹೋಗುವ ಸ್ಥಿತಿಯಿದೆ ಎಂದು ಆರೋಪಿಸಿದರು.
ಯಾವುದೇ ಕಾರಣಕ್ಕೂ ನಾವು ಅರಕೇರಾ ತಾಲೂಕು ಸೇರುವುದಿಲ್ಲ. ಮುಂದಿನ ದಿನಗಳಲ್ಲಿ ಪ್ರತಿಭಟಿಸುವ, ಕಾನೂನು ಹೋರಾಟ ಮಾಡುವ ಬಗ್ಗೆ ತೀರ್ಮಾನಿಸಿದರು. ಗ್ರಾಮಸ್ಥರಾದ ಬಸವರಾಜ ಮಂಡಲಗುಡ್ಡ, ಚಂದಪ್ಪ ಬುದ್ದಿನ್ನಿ, ಸಂಜೀವಪ್ಪ, ಗುಡದಪ್ಪ, ಗೋಪಾಲ, ಮಾನಪ್ಪ ಕಾವಲಿ, ತಿಮ್ಮಣ್ಣ ಕಾವಲಿ, ಶಿವಪ್ಪ ಮುರಾಳ ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು. ಹೊಸೂರು ಸಿದ್ದಾಪುರ ಗ್ರಾಪಂನಲ್ಲಿ ಕಳೆದ ವಾರ ದೇವದುರ್ಗ ತಾಲೂಕಿನಲ್ಲೇ ಉಳಿಯುವ ಬಗ್ಗೆ ಠರಾವು ಪಾಸ್ ಮಾಡಲಾಗಿತ್ತು.