ಹಾಸ್ಟೆಲ್‌ಗಳಲ್ಲಿ ಮೂಲಸೌಲಭ್ಯ ಕಲ್ಪಿಸಿ

31072022 devadurga protest
Published on

ದೇವದುರ್ಗ: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಸೇರಿ ಅದರ ಹಿಂಭಾಗದ ಎಜುಕೇಷನ್ ಲೇಔಟ್‌ನಲ್ಲಿ ಬರುವ ಎಲ್ಲ ಇಲಾಖೆಗಳ ಹಾಸ್ಟೆಲ್‌ಗಳಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶನಿವಾರ ಪ್ರತಿಭಟನೆ ನಡೆಸಿದರು.

ತಾಲೂಕಿನಲ್ಲಿ ಹಲವು ವಸತಿ ನಿಲಯಗಳು, ವಿವಿಧ ಇಲಾಖೆ ಹಾಸ್ಟೆಲ್‌ಗಳು ಇದ್ದರೂ ಮೂಲಸೌಲಭ್ಯವಿಲ್ಲದೆ ಮಕ್ಕಳ ಕಲಿಕೆಗೆ ಸಮಸ್ಯೆಯಾಗಿದೆ. ಬಹುತೇಕ ಶಾಲೆಗಳಲ್ಲಿ ಶುದ್ಧ ಕುಡಿವ ನೀರು, ವಿದ್ಯುತ್, ಫ್ಯಾನ್ ಸೌಲಭ್ಯ, ಗುಣಮಟ್ಟದ ಊಟದ ಕೊರತೆ, ಜಾಗದ ಸಮಸ್ಯೆ ಇರುವ ಕಾರಣ ವಿದ್ಯಾರ್ಥಿಗಳು ಸಂಕಷ್ಟದಲ್ಲಿ ಅಭ್ಯಾಸ ನಡೆಸುವ ಸ್ಥಿತಿಯಿದೆ. ಬಾಲಕ-ಬಾಲಕಿಯರ ಹಾಸ್ಟೆಲ್‌ಗಳು ಹಳೇ ಕಟ್ಟಡದಲ್ಲಿವೆ. ಹೊಸ ಕಟ್ಟಡ ನಿರ್ಮಿಸಿದ್ದರೂ ಉದ್ಘಾಟಿಸಿ ಇಲಾಖೆಗೆ ಹಸ್ತಾಂತರಿಸದ ಕಾರಣ ಮಕ್ಕಳು ಹಳೇ ಕಟ್ಟಡದಲ್ಲಿ ಕಲಿಯುವ ಸ್ಥಿತಿಯಿದೆ ಎಂದು ಪ್ರತಿಭಟನಾಕಾರರು ದೂರಿದರು. ಕೂಡಲೇ ಎಲ್ಲ ವಸತಿ ನಿಲಯಗಳಿಗೆ ಸೂಕ್ತ ಭದ್ರತೆ ಜತೆಗೆ ಮೂಲಸೌಲಭ್ಯ ಕಲ್ಪಿಸಬೇಕು. ನಿರ್ಲಕ್ಷಿಸಿದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net