ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ. ದುರ್ಬಳಕೆ ಪಿಡಿಒ ವಿರುದ್ಧ ಹಿರೇಬೂದೂರು ಗ್ರಾಪಂ ಸದಸ್ಯರ ಆರೋಪ

Devadurga Hirebudur Gram Panchayat
ಹಿರೇಬೂದೂರು ಗ್ರಾಮ ಪಂಚಾಯಿತಿ ಕಚೇರಿ
Published on

ದೇವದುರ್ಗ: ನರೇಗಾ ಯೋಜನೆ ಅನುದಾನ ದುರ್ಬಳಕೆಗೆ ಸಂಬಂಧಿಸಿದಂತೆ ಹಿರೇಬೂದೂರು ಪಿಡಿಒ ಉಮಾಕಾಂತ ಹಾಗೂ ಸದಸ್ಯರ ನಡುವೆ ಜಟಾಪಟಿ ಏರ್ಪಟ್ಟಿದ್ದು, ಈ ಕುರಿತು ತಾಪಂ ಇಒಗೆ ಸೋಮವಾರ ದೂರು ಸಲ್ಲಿಕೆಯಾಗಿದೆ. 9 ಕೃಷಿ ಹೊಂಡ, 13 ಬದು ನಿರ್ಮಾಣ ಕುರಿತು ನಕಲಿ ದಾಖಲೆ ಸಲ್ಲಿಸಿ ಬಿಲ್ ಎತ್ತುವಳಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಉದ್ಯೋಗ ಖಾತ್ರಿ ಯೋಜನೆಯಡಿ 2024-25ನೇ ಸಾಲಿನಲ್ಲಿ ಹಿರೇಬೂದೂರು ಹಾಗೂ ಬೂದಿನಾಳ ಗ್ರಾಮದಲ್ಲಿ ಕೃಷಿ ಹೊಂಡ ಹಾಗೂ ಬದುನಿರ್ಮಾಣ ಕಾಮಗಾರಿ ಕ್ರಿಯಾ ಯೋಜನೆ ರೂಪಿಸಲಾಗಿದೆ. ಆದರೆ, ಕಾಮಗಾರಿ ನಡೆಸದೆ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ. ದುರ್ಬಳಕೆ ಮಾಡಲಾಗಿದೆ ಎಂದು ದೂರಲಾಗಿದೆ.

ನಾಲ್ಕು ಹಳ್ಳಿಗಳಿಗೆ ಕೃಷಿ ಹೊಂಡ ಹಾಗೂ ಬದು ನಿರ್ಮಾಣ ಕಾಮಗಾರಿ ಮಂಜೂರು ಮಾಡಿಲ್ಲ. ಹಿರೇಬೂದೂರಿನಲ್ಲಿ ಒಂದೇ ಕುಟುಂಬಕ್ಕೆ ಬದು ನಿರ್ಮಾಣ ಕೆಲಸ ಮಂಜೂರು ಮಾಡಲಾಗಿದೆ. 22 ಕಾಮಗಾರಿಗಳ ಪೈಕಿ ಒಂದು ಕಡೆಯೂ ಕೆಲಸ ಮಾಡಿಲ್ಲ. ದಾಖಲೆಯಲ್ಲಿ ತೋರಿಸಿದ ಜಾಗದಲ್ಲಿ ರೈತರು ಬೇರೆ ಬೇರೆ ಬೆಳೆ ಬಿತ್ತನೆ ಮಾಡಿದ್ದಾರೆ. ಹಳೇ ಫೋಟೋ ಅಪ್‌ಲೋಡ್ ಮಾಡಿ, ನಕಲಿ ದಾಖಲೆ ಸೃಷ್ಟಿಸಿ ಅನುದಾನ ಎತ್ತುವಳಿ ಮಾಡಲಾಗಿದೆ. ಈ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿಲ್ಲ. ಪಿಡಿಒ ಅನುದಾನ ದುರ್ಬಳಕೆ ಆರೋಪದಡಿ ಈ ಹಿಂದೆ ಮೂರ‌್ನಾಲ್ಕು ಸಲ ಅಮಾನತುಗೊಂಡಿದ್ದಾರೆ ಎಂದು ತಿಳಿಸಲಾಗಿದೆ.

ಕೂಡಲೇ ಬದು ನಿರ್ಮಾಣ ಹಾಗೂ ಕೃಷಿ ಹೊಂಡ ಕಾಮಗಾರಿಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಪಿಡಿಒ ಉಮಾಕಾಂತರನ್ನು ಅಮಾನತು ಮಾಡಬೇಕು. ನರೇಗಾ ಯೋಜನೆ ಸಮರ್ಪಕವಾಗಿ ಜಾರಿಗೊಳಿಸಿ ಕೂಲಿಕಾರರಿಗೆ ಕೂಲಿ ಪಾವತಿ ಮಾಡಬೇಕು. ನಿರ್ಲಕ್ಷ್ಯ ಮಾಡಿದರೆ ಗ್ರಾಪಂಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಲಾಗಿದೆ. ಗ್ರಾಪಂ ಮಾಜಿ ಅಧ್ಯಕ್ಷೆ ದೇವೀಂದ್ರಮ್ಮ, ಸದಸ್ಯರಾದ ಶರಣಗೌಡ, ಬಸವಲಿಂಗಪ್ಪ, ಮಹೇಶ ಸಾಹು, ಕೌತುನಬಿ, ಲಿಂಗಮ್ಮ, ಶರಣಪ್ಪ, ಶೋಭಾ ಇತರರಿದ್ದರು.

ಸಂಪರ್ಕಕ್ಕೆ ಸಿಗದ ಅಧ್ಯಕ್ಷ, ಪಿಡಿಒ

ಗ್ರಾಪಂ ಸದಸ್ಯರ ದೂರಿಗೆ ಸಂಬಂಧಿಸಿದಂತೆ ಅಭಿಪ್ರಾಯ ಪಡೆಯಲು ಪಿಡಿಒ ಉಮಾಕಾಂತ, ಅಧ್ಯಕ್ಷ ಬೂದೆಪ್ಪ ಕ್ಯಾದಿಗಿ ಮೊಬೈಲ್ ಸಂಪರ್ಕಕ್ಕೆ ಸಿಗಲಿಲ್ಲ. ಪಿಡಿಒ ಫೋನ್ ಸ್ವಿಚ್ಡ್ ಆಫ್‌ಆಗಿದ್ದರೆ, ಅಧ್ಯಕ್ಷರು ಕರೆ ಸ್ವೀಕರಿಸಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net