

ಹರ್ ಘರ್ ತಿರಂಗಾ ಅಭಿಯಾನಕ್ಕೆ ಭಾರಿ ಬೆಂಬಲ ವಿದ್ಯಾರ್ಥಿಗಳಿಂದ ಧ್ವಜ ರ‌್ಯಾಲಿ
ದೇವದುರ್ಗ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕರೆ ನೀಡಿರುವ ಹರ್ ಘರ್ ತಿರಂಗಾ ಅಭಿಯಾನಕ್ಕೆ ತಾಲೂಕಿನಲ್ಲಿ ಭಾರಿ ಸ್ಪಂದನೆ ವ್ಯಕ್ತವಾಯಿತು. ಯುವಕರು, ಮಹಿಳೆಯರು, ಸರ್ಕಾರಿ ನೌಕರರು ಸೇರಿದಂತೆ ಬಹುತೇಕರು ಶನಿವಾರ ಬೆಳಗ್ಗೆ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿದರು.
ವಿವಿಧ ವ್ಯಾಪಾರಿ ಮಳಿಗೆಗಳು, ತಳ್ಳುವ ಬಂಡಿ, ಫುಟ್‌ಪಾತ್ ಅಂಗಡಿಗಳು, ಆಟೋ, ಬೈಕ್ ಹಾಗೂ ಸರಕು ಸಾಗಣೆ ವಾಹನಗಳಲ್ಲಿ ತ್ರಿವರ್ಣ ಧ್ವಜ ರಾರಾಜಿಸಿತು. ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ತಿರಂಗಾ ಅಭಿಯಾನಕ್ಕೆ ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್ ಚಾಲನೆ ನೀಡಿದರು. ವಿವಿಧ ಬಡಾವಣೆಯಲ್ಲಿ ಅಭಿಯಾನದ ಜಾಗೃತಿ ಮೂಡಿಸಲಾಯಿತು. ಬಿಇಒ ಡಾ.ಆರ್.ಇಂದಿರಾ ಹಾಗೂ ಶಿಕ್ಷಕರು ಇದ್ದರು.
ಪಟ್ಟಣದ ಮೌಲಾನಾ ಅಜಾದ್ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಜಾಥಾ ನಡೆಸಿದರು. ವಿವಿಧ ಇಲಾಖೆ ಕಚೇರಿಗಳ ಮೇಲೆ ಧ್ವಜಾರೋಹಣ ಮಾಡಲಾಯಿತು. ಬುಂಕಲದೊಡ್ಡಿಯಲ್ಲಿ ಯುವಕರು ಮನೆ ಮನೆಗೆ ಧ್ವಜ ನೀಡಿದರು. ಪ್ರಮುಖರಾದ ಭೀಮಣ್ಣ ನಾಡಗೌಡ, ಲಕ್ಕಪ್ಪ ತೋಟದಮನೆ, ಬಸವರಾಜ, ಗೋಪಿಕೃಷ್ಣ, ತಿಮ್ಮಣ್ಣ ಚಿಂಚೋಡಿ, ಶಿವಪ್ಪ, ವೆಂಕಟೇಶ ನಾಯಕ, ಯಲ್ಲಪ್ಪ, ವೆಂಕನಗೌಡ ಇತರರಿದ್ದರು.