ಸಂಘಟನೆಯಿಂದ ಅಭಿವೃದ್ಧಿ, ಯೋಜನೆಯಿಂದಲ್ಲ!; ಕಾಗಿನೆಲೆ ನಿರಂಜನಾನಂದಪುರಿ ಸ್ವಾಮೀಜಿ ಅಭಿಮತ

12012022 Devadurga Halumata ustava
Published on


ಹಾಲುಮತ ಸಂಸ್ಕೃತಿ ಉತ್ಸವಕ್ಕೆ ಸರಳವಾಗಿ ಚಾಲನೆ

ದೇವದುರ್ಗ: ಯಾವುದೇ ಸಮುದಾಯ ಸರ್ಕಾರ ನೀಡುವ ಯೋಜನೆಗಳು, ಸೌಲಭ್ಯಗಳಿಂದ ಪರಿಪೂರ್ಣವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಸಂಘಟನೆ, ಶಿಕ್ಷಣ ಹಾಗೂ ಕಾಯಕದಿಂದ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಕಾಗಿನೆಲೆ ಕನಕಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ತಾಲೂಕಿನ ತಿಂಥಣಿ ಬ್ರಿಡ್ಜ್‌ನ ಕನಕಗುರುಪೀಠದಲ್ಲಿ ಆಯೋಜಿಸಿದ್ದ ಹಾಲುಮತ ಸಂಸ್ಕೃತಿ ಉತ್ಸವಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು. ಯೋಜನೆಗಳು, ಸೌಲಭ್ಯಗಳು ತಾತ್ಕಾಲಿಕ ಮಾತ್ರ. ಕಾಯಕನಿಷ್ಠೆ ಮಾತ್ರ ಶಾಶ್ವತ. ಕುರುಬರು ಕಾಯಕದ ಮಹತ್ವ ಅರಿಯಬೇಕು. ಭಂಡಾರ, ಕಂಬಳಿ, ಕುರಿ ಉಣ್ಣೆ ಮಹತ್ವ ತಿಳಿಯಬೇಕು. ಹಸು ಸಂತತಿ ಕ್ಷೀಣಿಸಬಹುದು. ಕುರಿ ಸಂತತಿ ಕ್ಷೀಣಿಸದು. ಸಂತತಿ ತಡೆದಷ್ಟು ಬೆಳೆಯುತ್ತದೆ. ಹಸು ಸೆಗಣಿಯಲ್ಲಿ ಹುಳು ಇದ್ದರೆ, ಕುರಿಪಿಕ್ಕೆಯಲ್ಲಿ ಹುಳು ಕಾಣದು. ಇದು ಕುರಿ, ಕುರಿಗಾಹಿಗಳ ಶ್ರೇಷ್ಠತೆ ತೋರಿಸುತ್ತದೆ ಎಂದರು.

ಹಟ್ಟಿಚಿನ್ನಗಣಿ ಕಂಪನಿ ಅಧ್ಯಕ್ಷ ಮಾನಪ್ಪ ವಜ್ಜಲ್ ಮಾತನಾಡಿ, ಕುರುಬರ ಮನಸ್ಸು ಹಾಲಿನಷ್ಟೆ ಶ್ರೇಷ್ಠವಾದದ್ದು. ಎಲ್ಲರ ಜತೆ ಸೌಹಾರ್ದದಿಂದ ಬದುಕು ಗುಣ ಅವರದ್ದು. ದೇವಸ್ಥಾನ ಮುಖ್ಯರಸ್ತೆ ಅಭಿವೃದ್ಧಿ ಕಂಪನಿಯಿಂದ 16ಲಕ್ಷ ಹಾಗೂ ಅನ್ನದಾಸೋಹಕ್ಕೆ 2ಲಕ್ಷ ರೂ. ಸಹಾಯಧನ ನೀಡಲಾಗಿದೆ. ದೇವಸ್ಥಾನ ಅಭಿವೃದ್ಧಿಗೆ ತನು, ಮನ, ಧನದಿಂದ ಸೇವೆ ಮಾಡಲು ಸದಾಸಿದ್ಧ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net