

ದೇವದುರ್ಗ: ಗುರುವಾರ ತಡರಾತ್ರಿ ಬಿರುಗಾಳಿ ಸಹಿತ ಮಳೆಗೆ ಅವಳಿ ಗ್ರಾಮಗಳಾದ ಹದ್ದಿನಾಳ-ಬೂದಿನಾಳ ತತ್ತರಿಸಿವೆ. ಹಲವು ಮನೆಗಳಿಗೆ ಹಾನಿಯಾಗಿದ್ದು, ಕುಡಿವ ನೀರು, ವಿದ್ಯುತ್, ರಸ್ತೆ ಸಂಪರ್ಕ ಕಡಿತವಾಗಿ ಜನರು ಸಂಕಷ್ಟ ಎದುರಿಸಿದ್ದಾರೆ.
ಹದ್ದಿನಾಳ ಗ್ರಾಮದಲ್ಲಿ ಸತತ ನಾಲ್ಕು ಗಂಟೆಗಳ ಕಾಲ ಬಿರುಗಾಳಿ ಸಹಿತ ಮಳೆ ಸುರಿದಿದೆ. ಇದರಿಂದ 20ಕ್ಕೂ ಮನೆಗಳಿಗೆ ನೀರು ನುಗ್ಗಿದ್ದು ನಿವಾಸಿಗಳು ನರಕಯಾತನೆ ಅನುಭವಿಸಿದ್ದಾರೆ. ಮುಖ್ಯರಸ್ತೆಗೆ ಹಾಕಿದ್ದ ಪೂಲ್(ಕಿರುಸೇತುವೆ) ಬ್ಲಾಕ್ ಆಗಿದ್ದರಿಂದ ನೀರು ಮನೆಗಳಿಗೆ ನುಗ್ಗಿ ಜನಜೀವನ ಅಸ್ತವ್ಯವಸ್ತವಾಗಿದೆ. ಹಲವು ಕಂಬಗಳು ನೆಲಕ್ಕುರುಳಿದ್ದು ವಿದ್ಯುತ್ ಕಡಿತವಾಗಿದೆ. ರಸ್ತೆಯ ಕಿರುಸೇತುವೆ ನೀರಿನ ರಭಸಕ್ಕೆ ಕಿತ್ತುಹೋಗಿ ಸಂಪರ್ಕಕ್ಕೆ ಸಮಸ್ಯೆಯಾಗಿದೆ.
ಚನ್ನಮ್ಮ ಸಿದ್ದಲಿಂಗಪ್ಪ ಮನೆಗೆ ನೀರುನುಗ್ಗಿ ರಸಗೊಬ್ಬರ ಕೊಚ್ಚಿಹೋಗಿದ್ದರೆ, ನಾಗಪ್ಪ, ಬೂದೆಪ್ಪ, ಸಿದ್ದಪ್ಪ ಸೇರಿ 20ಕ್ಕೂ ಹೆಚ್ಚು ಮನೆಗೆ ನೀರುನುಗ್ಗಿ ನಿತ್ಯದ ಬಳಕೆ ವಸ್ತುಗಳು, ದವಸ-ಧಾನ್ಯಗಳು ಹಾಳಾಗಿವೆ. ಬಿತ್ತನೆ ಮಾಡಲು ಕೆಲ ರೈತರು ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ತಂದಿದ್ದರು. ಮನೆಗೆ ನೀರು ನುಗ್ಗಿದ್ದರಿಂದ ಹಾನಿಯಾಗಿದೆ. ನಾಗಪ್ಪ ಮಡಿವಾಳ ಅವರ ಹತ್ತು ಕೋಳಿಗಳು ಸತ್ತಿವೆ. ದೊಡ್ಡಪ್ಪಗೌಡ ಹದ್ದಿನಾಳ ತೋಟದಲ್ಲಿ ಬೆಳೆಸಿದ್ದ 40ಕ್ಕೂ ಹೆಚ್ಚು ವಿವಿಧ ಮರಗಳು ನೆಲಕ್ಕುರುಳಿದ್ದು, ಕಂಬಗಳು ಬಿದ್ದು ರಾತ್ರಿಯಡೀ ವಿದ್ಯುತ್ ಇಲ್ಲದೆ ಜನರು ಜಾಗರಣೆ ಮಾಡಿದ್ದಾರೆ.
ಬೂದಿನಾಳ ಗ್ರಾಮದಲ್ಲಿ ಬಿರುಗಾಳಿಗೆ ಶುದ್ಧ ಕುಡಿವ ನೀರಿನ ಘಟಕವೇ ಮಾಯವಾಗಿದೆ. ಲಕ್ಷಾಂತರ ರೂ. ವೆಚ್ಚದಲ್ಲಿ ತಗಟಿನ ಸೀಟ್‌ನಿಂದ ಕುಡಿವ ನೀರಿನ ಘಟಕ ಸ್ಥಾಪನೆ ಮಾಡಲಾಗಿತ್ತು. ಕಳಪೆ ಕಾಮಗಾರಿ ಹಾಗೂ ಬಿಗಿಯಾದ ಕಬ್ಬಿಣದ ರಕ್ಷಣೆ ಇಲ್ಲದೆ ಬಿರುಗಾಳಿಗೆ ಹಾರಿಹೋಗಿದೆ. ಘಟಕ ಗಾಳಿಗೆ ಸಂಪೂರ್ಣ ಕಿತ್ತುಹೋಗಿ ನೀರಿನ ತೊಟ್ಟಿಗಳು ನೆಲಕ್ಕರುಳಿದಿವೆ. ಕಿರುಸೇತುವೆ ಕೊಚ್ಚಿಹೋಗಿದ್ದರಿಂದ ಕುಡಿವ ನೀರಿಗೆ ಹಾಕಿದ್ದ ಪೈಪ್‌ಲೈನ್ ಕಿತ್ತುಹೋಗಿ ಕುಡಿವ ನೀರಿಗೆ ಸಮಸ್ಯೆಯಾಗಿದೆ.
ತಾಪಂ ಸಹಾಯಕ ನಿರ್ದೇಶಕ ಅಣ್ಣರಾವ್, ಗ್ರಾಮ ಲೆಕ್ಕಾಧಿಕಾರಿ ಸಂತೋಷ ಭೇಟಿನೀಡಿ ಪರಿಹಾರದ ಭರವಸೆ ನೀಡಿದರು. ಗ್ರಾಮಸ್ಥರಾದ ದೊಡ್ಡಪ್ಪಗೌಡ, ಬಸವರಾಜಪ್ಪ, ಅಜೀಜ್‌ಸಾಬ್, ದೊಡ್ಡಬೂದೆಪ್ಪ ಪೂಜಾರಿ, ಬಂದಪ್ಪಗೌಡ, ಯಂಕಪ್ಪ ನಾಯಕ ಇದ್ದರು.