ಮೂರು ಸಾವಿರ ಮೆಟ್ರಿಕ್ ಟನ್ ಮರಳು ಜಪ್ತಿ

13
ದೇವದುರ್ಗ ತಾಲೂಕು ಗೋಪಳಾಪುರ ಗ್ರಾಮದಲ್ಲಿ ಅಧಿಕಾರಿಗಳು ಅಕ್ರಮವಾಗಿ ದಾಸ್ತಾನು ಮಾಡಿದ್ದ ಅಪಾರ ಪ್ರಮಾಣದ ಮರಳು ಜಪ್ತಿ ಮಾಡಿದರು. ಪಿಐ ಅಶೋಕ ಸದಲಗಿ, ಗಣಿಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಪುಷ್ಪಲತಾ, ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಕಂದಾಯ ನಿರೀಕ್ಷಕ ಭೀಮನಗೌಡ ಪಾಟೀಲ್ ಇತರರಿದ್ದರು.
Published on

ದೇವದುರ್ಗ: ತಾಲೂಕಿನ ವಿವಿಧೆಡೆ ಪೊಲೀಸರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಬುಧವಾರ ಜಂಟಿಯಾಗಿ ದಾಳಿ ನಡೆಸಿ ನಾಲ್ಕು ಹಿಟಾಚಿ, 3 ಟಿಪ್ಪರ್, 2 ಟ್ರ್ಯಾಕ್ಟರ್ ವಶಕ್ಕೆ ಪಡೆದು ಸುಮಾರು 25ಲಕ್ಷ ರೂ. ಮೌಲ್ಯದ 3 ಸಾವಿರ ಮೆಟ್ರಿಕ್ ಟನ್ ಮರಳು ಜಪ್ತಿ ಮಾಡಿದ್ದಾರೆ.

ಗೋಪಳಾಪುರ ಬಳಿ ಕೃಷ್ಣಾ ನದಿಯಲ್ಲಿ ಮರಳನ್ನು ಅಕ್ರಮವಾಗಿ ದಾಸ್ತಾನು ಮಾಡುತ್ತಿದ್ದ 2 ಹಿಟಾಚಿ ವಶಕ್ಕೆ ಪಡೆಯಲಾಗಿದ್ದು ಸುಮಾರು 6.32ಲಕ್ಷ ರೂ. ಮೌಲ್ಯದ 800ಮೆಟ್ರಿಕ್ ಟನ್ ಮರಳು ಜಪ್ತಿ ಮಾಡಲಾಗಿದೆ. ಇದೇ ಗ್ರಾಮದಲ್ಲಿ ನದಿಯಿಂದ ಮರಳು ಸಂಗ್ರಹಕ್ಕೆ ಬಳಸುತ್ತಿದ್ದ ಇನ್ನೆರಡು ಜೆಸಿಬಿಗಳನ್ನು ವಶಕ್ಕೆ ಪಡೆಯಲಾಗಿದ್ದು ಚಾಲಕರು ಪರಾರಿಯಾಗಿದ್ದಾರೆ.

ನಗರಗುಂಡ ಗ್ರಾಸ್‌ನಲ್ಲಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ವಶಕ್ಕೆ ಪಡೆದು 2 ಮೆಟ್ರಿಕ್ ಟನ್ ಮರಳು, ದೇವದುರ್ಗ-ಹೂವಿನಹೆಡಗಿ ರಸ್ತೆಯಲ್ಲಿ 25 ಮೆಟ್ರಿಕ್ ಮರಳು ಸಾಗಿಸುತ್ತಿದ್ದ 2 ಟಿಪ್ಪರ್ ವಶಕ್ಕೆ ಪಡೆಯಲಾಗಿದೆ. ಗೋಪಳಾಪುರದ ಸರ್ವೇ ನಂಬರ್ 36/2ರಲ್ಲಿ ಸಂಗ್ರಹಿಸಿದ್ದ ಸುಮಾರು 16.59 ಲಕ್ಷ ರೂ. ಮೌಲ್ಯದ 2100 ಮೆಟ್ರಿಕ್ ಟನ್ ಮರಳು ವಶಕ್ಕೆ ಪಡೆದು ಮಲ್ಲಿಕಾರ್ಜುನ ಶಾಂತಗೌಡ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net