ಗಲಗ ಶ್ರೀ ಚನ್ನಬಸವೇಶ್ವರ ಜಾತ್ರೆ ಸಂಪನ್ನ

Untitled design1
ದೇವದುರ್ಗದ ಗಲಗ ಶ್ರೀ ಚನ್ನಬಸವ ದೇವರ ಜಾತ್ರೆ ನಿಮಿತ್ತ ಪ್ರಜ್ಞಾವಂತ ಯುವಕರ ಬಳಗದಿಂದ ಭಕ್ತರಿಗೆ ತಂಪು ಪಾನೀಯ ವಿತರಣೆಗೆ ಶ್ರೀ ಗಂಗಾಧರಪ್ಪ ತಾತ ಚಾಲನೆ ನೀಡಿದರು. ಶ್ರೀ ಅಯ್ಯಣ್ಣ ತಾತ, ಯುವಕರಾದ ಚನ್ನಬಸವ ಭಜಂತ್ರಿ, ವೈದ್ಯನಾಥ ಅರಸೂರ, ಶ್ರೀ ಕಾಂತ ಪದ್ಮಶಾಲಿ, ಅಕ್ಬರ್ ನದಾಫ್, ಬಾಬು, ಉದಯ, ಚನ್ನಪ್ಪ, ಅಕ್ಬರ್ ಸಾಬ್ ಇತರರಿದ್ದರು.
Published on

ದೇವದುರ್ಗ: ತಾಲೂಕಿನ ಆರಾಧ್ಯ ದೈವ ಗಲಗ ಗ್ರಾಮದ ಶ್ರೀ ಚನ್ನಬಸವೇಶ್ವರ ದೇವರ ಜಾತ್ರಾ ಮಹೋತ್ಸವ ಶನಿವಾರ ಅದ್ದೂರಿಯಾಗಿ ಜರುಗಿತು.
ಈ ಜಾತ್ರೆ ವರ್ಷದಲ್ಲಿ ಎರಡು ಸಲ ಜರುಗುತ್ತಿರುವುದು ವಿಶೇಷ. ವರ್ಷದ ಮೊದಲ ಜಾತ್ರೆ ದವನದ ಹುಣ್ಣಿಮೆ ಆದ 11ನೇ ದಿನಕ್ಕೆ (ಶನಿವಾರ) ಜರುಗಿದರೆ, ಎರಡನೇ ಜಾತ್ರೆ ಗೌರಿ ಹುಣ್ಣಿಮೆ ಆದ 11ನೇ ದಿನಕ್ಕೆ ಜರುಗುತ್ತದೆ. ಬೆಟ್ಟದ ಮೇಲಿರುವ ಶ್ರೀಚನ್ನಬಸವೇಶ್ವರ ಜಾತ್ರೆ ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿದ್ದಾರೆ. ಶುಕ್ರವಾರ ನೈವೈದ್ಯ ಜರುಗಿದರೆ, ಶನಿವಾರ ಧೂಳಗಾಯಿ ಕಾರ್ಯಕ್ರಮ ನಡೆಯಿತು.

ಸಾವಿರಾರು ಭಕ್ತರು ಎಡೆ, ಕಾಯಿ ಅರ್ಪಿಸಿ ಭಕ್ತಿಭಾವ ಮೆರೆದರು. ಜಾತ್ರೆ ನಿಮಿತ್ತ ಬೆಳಗ್ಗೆ 6ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ, ಪೂಜಾ ವಿಧಿವಿಧಾನಗಳು ಜರುಗಿದವು. ರಾತ್ರಿ ಅಖಂಡ ಭಜನೆ ಕಾರ್ಯಕ್ರಮ ಜರುಗಿತು. ಮುಂಗಾರು ಹಂಗಾಮಿನಲ್ಲಿ ಶ್ರೀಮಠದಲ್ಲಿ ಹೇಳಿಕೆ ನೀಡಲಾಗುತ್ತಿದ್ದು ಪೂಜಾರಿಗಳು ಪುಸ್ತಕದಲ್ಲಿ ಕಡ್ಡಿಹಾಕಿ ಹೇಳಿಕೆ ನೀಡುವುದು ವಾಡಿಕೆ. ಶ್ರೀ ಮಠದ ಹೇಳಿಕೆ ನೋಡಿ ಭಕ್ತರು ಕೃಷಿ ಚಟುವಟಿಕೆಗೆ ಮುಂದಾಗುತ್ತಾರೆ.
ಬೇಸಿಗೆ ಹಿನ್ನೆಲೆಯಲ್ಲಿ ಗ್ರಾಮದ ಪ್ರಜ್ಞಾವಂತ ಯುವಕರ ಬಳಗ ಜಾತ್ರೆಗೆ ಬರುವ ಭಕ್ತರಿಗೆ ಪಾನಕ ವಿತರಣೆ ಮಾಡಿ ಗಮನ ಸೆಳೆಯಿತು. ಯುವಕರ ಬಳಗ ಬೆಳಗ್ಗೆ 7ರಿಂದ ಭಕ್ತರಿಗೆ ಮಜ್ಜಿಗೆ, ಪಾನಕ, ಶರಬತ್ ಮಾಡಿ ವಿತರಿಸಿತು. ಯುವಕರ ಬಳಗ ಪ್ರತಿವರ್ಷ ಪಾನಕ ವಿತರಣೆ ಕಾರ್ಯಕ್ರಮ ನಡೆಸಿ ಗಮನ ಸೆಳೆಯುತ್ತದೆ. ಕಾರ್ಯಕ್ರಮದಲ್ಲಿ ಹಿಂದು-ಮುಸ್ಲಿಂ ಯುವಕರು ಭಾಗವಹಿಸಿ ಸೌಹಾರ್ದತೆ ಮೆರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net