ಶ್ರೀ ಬೂದಿಬಸವೇಶ್ವರ ಮಹಾರಥೋತ್ಸವ ಸಂಪನ್ನ, ಅದ್ದೂರಿ ಕ್ಷಣ ಕಣ್ತುಂಬಿಕೊಂಡ ಭಕ್ತ ಸಮೂಹ

24022021 Devadurga Gabbur Budibasaveshwara fair
Published on

ದೇವದುರ್ಗ: ತಾಲೂಕಿನ ಗಬ್ಬೂರು ಶ್ರೀಬೂದಿಬಸವೇಶ್ವರ ಜಾತ್ರೆ ನಿಮಿತ್ತ ಬುಧವಾರ ಮಹಾರಥೋತ್ಸವ ಅಪಾರ ಭಕ್ತರ ನಡುವೆ ಅದ್ದೂರಿಯಾಗಿ ಜರುಗಿತು. ಬೆಳಗ್ಗೆಯಿಂದ ರಥೋತ್ಸವಕ್ಕೆ ಭಕ್ತ ಸಮೂಹ ಹರಳೆಣ್ಣೆ ಅಭಿಷೇಕ ನೆರವೇರಿಸಿ, ಹೂವು, ಹಣ್ಣು, ಬಾಳೆದಿಂಡು, ಮಾವಿನ ಎಲೆಗಳಿಂದ ಶೃಂಗೀರಿಸಿದರು.

ಜಾತ್ರಾ ಮಹೋತ್ಸವ ನಿಮಿತ್ತ ಬೆಳಗ್ಗೆ ಶ್ರೀಗಳ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ಜರುಗಿತು.

ಶ್ರೀ ಬೂದಿಬಸವ ಶಿವಾಚಾರ್ಯ ಸ್ವಾಮೀಜಿ ಸೇರಿ ವಿವಿಧ ಮಠದ ಶ್ರೀಗಳ ನೇತೃತ್ವದಲ್ಲಿ ಕರ್ತೃ ಗದ್ದುಗೆಯಿಂದ ಮೆರವಣಿಗೆ ಹೊರಟು, ಊರಿನ ಪ್ರಮುಖ ಬೀದಿಗಳ ಮೂಲಕ ಸಕಲ ವಾದ್ಯಮೇಳದೊಂದಿಗೆ ಶ್ರೀಮಠಕ್ಕೆ ಆಗಮಿಸಿ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.

ನಂತರ ಜರುಗಿದ ರಥೋತ್ಸವಕ್ಕೆ ಭಕ್ತರು ಹೂವು, ಹಣ್ಣು, ಉತ್ತುತ್ತಿ, ಮಂಡಾಳು ಅರ್ಪಿಸಿ ಪುನಿತರಾದರು. ಜಾತ್ರೆ ನಿಮಿತ್ತ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.ಶ್ರೀ ಶಂಭುಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಶ್ರೀಚನ್ನಬಸವ ತಾತ ಹಾಗೂ ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಕಾಮಿಡಿ ಎಕ್ಸ್‌ಪ್ರೆಸ್ ಇಂದು: ಜಾತ್ರಾ ಮಹೋತ್ಸವ ಅಂಗವಾಗಿ ಫೆ.25ರಂದು ಕಡೆ ಉಚ್ಛಾಯ, ಧಾರ್ಮಿಕ ಸಭೆ ಹಾಗೂ ಕಾಮಿಡಿ ಎಕ್ಸ್‌ಪ್ರೆಸ್ ಕಾರ್ಯಕ್ರಮ ನಡೆಯಲಿದೆ. ಸಂಜೆ 6ಕ್ಕೆ ಧಾರ್ಮಿಕ ಸಭೆ ಮತ್ತು ಹಾಸ್ಯ ಕಲಾವಿದ ಪ್ರಾಣೇಶ ಗಂಗಾವತಿ, ನರಸಿಂಹ ಜೋಷಿ ಅವರಿಂದ ನಗುವೆ ಸ್ವರ್ಗ ಕಾರ್ಯಕ್ರಮ, ನಂತರ ವಿಶ್ವತಾ ಭಟ್‌ರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net