

ದೇವದುರ್ಗ: ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿರುವ ಸ್ಥಳೀಯ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿ ಪರ ಮತಬೇಟೆಗೆ ಮುಂಬರುವ ದಿನಗಳಲ್ಲಿ ಘಟಾನುಘಟಿ ನಾಯಕರು ಆಗಮಿಸಲಿದ್ದಾರೆ.
ಮೂರು ಪಕ್ಷದ ನಾಯಕರು ಒಂದೆರಡು ಸುತ್ತಿನ ಪ್ರಚಾರಕೈಗೊಂಡು, ದೊಡ್ಡ ನಾಯಕರನ್ನು ಕರೆಸಿ ಭರ್ಜರಿ ಪ್ರಚಾರ ಮಾಡಿದ್ದಾರೆ. ಚುನಾವಣೆ ಘೋಷಣೆಯಾದ ನಂತರ ದೊಡ್ಡ ನಾಯಕರ‌್ಯಾರೂ ತಾಲೂಕಿಗೆ ಬಂದಿಲ್ಲ. ಮೊದಲ ಬಾರಿಗೆ ಮೂರೂ ಪಕ್ಷದ ನಾಯಕರು ಬರುತ್ತಿದ್ದಾರೆ. ಅಭ್ಯರ್ಥಿಗಳು ಈಗಾಗಲೇ ಪ್ರಚಾರ ಆರಂಭಿಸಿದ್ದು ಗ್ರಾಮೀಣ ಭಾಗದಲ್ಲಿ ಮತಬೇಟೆಯಾಡುತ್ತಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಏ.28ರಂದು ಪಟ್ಟಣಕ್ಕೆ ಆಗಮಿಸಲಿದ್ದು ಕಾಂಗ್ರೆಸ್ ಅಭ್ಯರ್ಥಿ ಶ್ರೀದೇವಿ ರಾಜಶೇಖರ ನಾಯಕ ಪರವಾಗಿ ಪ್ರಚಾರ ಕೈಗೊಳ್ಳಲಿದ್ದಾರೆ. ಟಿಎಪಿಸಿಎಂಎಸ್ ಮೈದಾನದಲ್ಲಿ ವೇದಿಕೆ ಸಿದ್ಧಮಾಡಿದ್ದು ಕಾಂಗ್ರೆಸ್ ಕಚೇರಿಯಿಂದ ವೇದಿಕೆವರೆಗೆ 1ಕಿಮೀ ಮೆರವಣಿಗೆ ನಡೆಯಲಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಶಾಸಕ ಜಮೀರ್ ಅಹ್ಮದ್ ಭಾಗವಹಿಸಲಿದ್ದಾರೆ. ಸಮಾವೇಶ ಕಾಂಗ್ರೆಸ್ ಕಾರ್ಯಕರ್ತರ ಹುಮ್ಮಸ್ಸು ಹಿಮ್ಮಡಿಗೊಳಿಸಿದೆ.
ಮೇ 1ರಂದು ಜೆಡಿಎಸ್ ಅಭ್ಯರ್ಥಿ ಕರೆಮ್ಮ ಜಿ.ನಾಯಕ ಪರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಚಾರ ಮಾಡುವ ಸಾಧ್ಯತೆಯಿದೆ. ಮೇ 1ರಂದು ಕಾರ್ಯಕ್ರಮ ನಿಗದಿಯಾಗಿದ್ದು ಅವರಿಲ್ಲದಿದ್ದರೆ ಮಾಜಿ ಸಿಎಂ ಕುಮಾರಸ್ವಾಮಿ ಬರಲಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಸೇರಿ ರಾಜ್ಯ ನಾಯಕರು ಭಾಗವಹಿಸುವರು. ಒಂದೂವರೆ ತಿಂಗಳ ಹಿಂದೆ ಕುಮಾರಸ್ವಾಮಿ ಪಂಚರತ್ನ ಯಾತ್ರೆ ಕೈಗೊಂಡು ಪ್ರಚಾರ ಕೈಗೊಂಡಿದ್ದರು.
ಇನ್ನು ಬಿಜೆಪಿ ಅಭ್ಯರ್ಥಿ ಶಾಸಕ ಕೆ.ಶಿವನಗೌಡ ನಾಯಕ ಪರ ಪ್ರಚಾರ ನಡೆಸಲು ಮೇ 4ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರಲಿದ್ದಾರೆ. ಅಲ್ಲದೆ ಸಚಿವರು ಭಾಗವಹಿಸಲಿದ್ದು, ಬಹುಮುಖ್ಯವಾಗಿ ಸಿಎಂಗೆ ಬೆಂಬಲ ಘೋಷಿಸಿರುವ ಚಿತ್ರನಟ ಕಿಚ್ಚ ಸುದೀಪ್ ಆಗಮಿಸಿ ಪ್ರಚಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. ಚುನಾವಣೆಗೆ ಮುನ್ನ ಬಿಜೆಪಿ ಜನಸಂಕಲ್ಪ ಯಾತ್ರೆ, ಕೇಂದ್ರ ಗೃಹಸಚಿವ ಅಮಿತ್ ಶಾ ಸಮಾವೇಶ ಮಾಡಿ ಪ್ರಚಾರ ಕೈಗೊಂಡಿತ್ತು.
ಮಾಜಿ ಸಂಸದ ಬಿ.ವಿ.ನಾಯಕ, ಕೆಪಿಸಿಸಿ ವಕ್ತಾರ ಹನುಮಂತಪ್ಪ ಆಲ್ಕೋಡ್ ಪಕ್ಷ ತೊರೆದಿರುವುದು ಕಾರ್ಯಕರ್ತರಲ್ಲಿ ಹುಮ್ಮಸ್ಸು ಕಸಿದಂತಾಗಿದೆ. ಇಂಥ ಹೊತ್ತಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷೇತ್ರಕ್ಕೆ ಬರುತ್ತಿದ್ದು ಕಾರ್ಯಕರ್ತರಲ್ಲಿ ಖುಷಿ ಹಿಮ್ಮಡಿಗೊಂಡಿದೆ. ಒಬ್ಬಂಟಿಯಾಗಿರುವ ಅಭ್ಯರ್ಥಿ ಶ್ರೀದೇವಿ ರಾಜಶೇಖರ ನಾಯಕಪರ ಸಿದ್ದರಾಮಯ್ಯ ಪ್ರಚಾರ ನಡೆಸಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಲಿದ್ದಾರೆ. ತಾಲೂಕಿನಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದು ಕಾಂಗ್ರೆಸ್‌ಗೆ ಶಕ್ತಿ ತುಂಬುವ ಸಾಧ್ಯತೆಯಿದೆ.