

ದೇವದುರ್ಗ: ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ಇದರಿಂದಾಗಿ ತಾಲೂಕಿನ ಹೂವಿನಹೆಡಗಿ ಸೇತುವೆ ಶುಕ್ರವಾರ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ದೇವದುರ್ಗ-ಯಾದಗಿರಿ ಮಾರ್ಗದಲ್ಲಿ ಸಂಪರ್ಕ ಕಡಿತವಾಗಿದೆ.
ನಾರಾಯಣಪುರ ಜಲಾಶಯದಿಂದ ಗುರುವಾರ ಸಂಜೆ ಕೃಷ್ಣಾ ನದಿಗೆ 2.50 ಲಕ್ಷ ಕ್ಯೂಸೆಕ್ ನೀರು ಹರಿಸಲಾಗಿತ್ತು. ರಾತ್ರಿ ಒಳಹರಿವು ಹೆಚ್ಚಾಗಿದ್ದರಿಂದ ಶುಕ್ರವಾರ 2.90 ಕ್ಯೂಸೆಕ್ ನೀರು ಹರಿಸಲಾಗಿದೆ. ಬೆಳಗ್ಗೆ ಸೇತುವೆ ಮೇಲ್ಭಾಗದಲ್ಲಿ ಹರಿಯುತ್ತಿದ್ದ ನೀರು, ಸಂಜೆ ವೇಳೆಗೆ ಸಂಪೂರ್ಣವಾಗಿ ಆವರಿಸಿಕೊಂಡಿದೆ. ಹೀಗಾಗಿ ದೇವದುರ್ಗ-ಯಾದಗಿರಿ ಮಾರ್ಗದಲ್ಲಿ ಸಂಚರಿಸುವ ವಾಹನಗಳು ತಿಂಥಣಿ ಬ್ರಿಡ್ಜ್ ಮೂಲಕ ಸುಮಾರು 80 ಕಿಲೋಮೀಟರ್ ಹೆಚ್ಚುವರಿ ದೂರ ಕ್ರಮಿಸುವಂತಾಗಿದೆ.
ನದಿಗೆ ಅಪಾರ ಪ್ರಮಾಣದ ನೀರು ಹರಿಸಿರುವುದರಿಂದ ಕೃಷಿ ಜಮೀನಿಗೆ ನೀರು ನುಗ್ಗಿದ್ದು, ಭತ್ತ, ಹತ್ತಿ, ತೊಗರಿ ಸೇರಿ ವಿವಿಧ ಬೆಳೆಗಳು ಕೊಚ್ಚಿಹೋಗಿವೆ. ನೆರೆ ಹಾವಳಿಯಿಂದ ನದಿದಂಡೆಯ 25ಕ್ಕೂ ಹೆಚ್ಚು ಹಳ್ಳಿಗಳ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆಯನ್ನೂ ಕಳೆದುಕೊಳ್ಳುವಂತಾಗಿದೆ.
ಹೂವಿನಹೆಡಗಿ ಶ್ರೀ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದ್ದು, ಕೊಪ್ಪರದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಸುತ್ತ ನೀರು ಆವರಿಸಿದೆ. ಕೊಪ್ಪರದ ಆಂಜನೇಯ ದೇವಸ್ಥಾನ ಹಾಗೂ ಬಸವೇಶ್ವರ ದೇವಸ್ಥಾನದವರೆಗೂ ನೀರು ಬಂದಿದೆ. ಗೂಗಲ್ ಗ್ರಾಮದ ಅಲ್ಲಮಪ್ರಭು ದೇವಸ್ಥಾನದ ಗೋಡೆವರೆಗೂ ನೀರು ಬಂದಿದೆ.
ಕೃಷ್ಣಾ ನದಿ ತುಂಬಿ ಹರಿಯುತ್ತಿರುವ ಕಾರಣ ಗೂಗಲ್ ಬ್ರಿಡ್ಜ್ ಕಂ ಬ್ಯಾರೇಜ್‌ನ ಎಲ್ಲ ಗೇಟ್‌ಗಳನ್ನು ಮೇಲೆತ್ತಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಹೂವಿನಹೆಡಗಿ, ಕೊಪ್ಪರ, ಬಾಗೂರು, ಚಿಂಚೋಡಿ, ಲಿಂಗದಹಳ್ಳಿ, ಗೋಪಾಳಾಪುರ, ಜೋಳದಹೆಡಗಿ, ಅಂಜಳ ಸೇರಿ ವಿವಿಧ ಗ್ರಾಮಗಳ ಕೃಷಿ ಜಮೀನಿಗೆ ನೀರು ನುಗ್ಗಿದೆ. ಗೂಗಲ್ ಬ್ರಿಡ್ಜ್ ಕಂ ಬ್ಯಾರೇಜ್ ಮುಳುಗಡೆ ಆಗುವ ಸಾಧ್ಯತೆ ಇದೆ. ಕೃಷ್ಣಾ ನದಿಯ ಭೋರ್ಗರೆತ ನದಿ ದಂಡೆ ಗ್ರಾಮಗಳ ರೈತರಲ್ಲಿ ಆತಂಕ ತಂದಿದೆ.