

ರೈತರ ಆಗ್ರಹ ದೇವದುರ್ಗದ ವಿವಿಧೆಡೆ ಸಭೆ | ಮೂರು ದಿನದ ಗಡುವು
ದೇವದುರ್ಗ: ನಾರಾಯಣಪುರ ಬಲದಂಡೆ ನಾಲೆಗೆ ನೀರು ಹರಿಸುವುದಕ್ಕೆ ಸಂಬಂಧಿಸಿದಂತೆ ಏಕಪಕ್ಷೀಯ ಹಾಗೂ ಅವೈಜ್ಞಾನಿಕ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆರೋಪಿಸಿ ಹೋರಾಟ ನಡೆಸಲು ತಾಲೂಕಿನ ರೈತರು ಮುಂದಾಗಿದ್ದಾರೆ.
ಈ ಕುರಿತು ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸುಂಕೇಶ್ವರಹಾಳ, ಇಂಗಳದಾಳ, ನಗರಗುಂಡ ಹಾಗೂ ಇತರ ವಿವಿಧ ಗ್ರಾಮಗಳಲ್ಲಿ ಸಭೆ ನಡೆಸಲಾಗಿದೆ. ನೀರಾವರಿ ಇಲಾಖೆ ಅಧಿಕಾರಿಗಳು ತುರ್ತು ಸಭೆ ಕರೆದು ನೀರಾವರಿ ಸಲಹಾ ಸಮಿತಿಯಲ್ಲಿ ಕೈಗೊಂಡಿರುವ ನಿರ್ಣಯ ಬದಲಾವಣೆ ಮಾಡಬೇಕೆಂದು ಒತ್ತಾಯಿಸಿದರು.
ಪೊಲೀಸರ ಮನವಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಐ ಹೊಸಕೇರಪ್ಪ ಕರ್ನಾಟಕ ರಾಜ್ಯ ರೈತ ಸಂಘದ ಪ್ರಮುಖರೊಂದಿಗೆ ಶುಕ್ರವಾರ ಚರ್ಚಿಸಿದರು. ರೈತರು ಏಕಾಏಕಿ ಹೋರಾಟ ಮಾಡಿದರೆ ಸಾರ್ವಜನಿಕರಿಗೆ ಸಮಸ್ಯೆಯಾಗಲಿದೆ. ರಸ್ತೆ ಸಂಚಾರ ತಡೆ ನಡೆಸುವುದರಿಂದ ವಾಹನ ಓಡಾಟಕ್ಕೆ ಅಡಚಣೆಯಾಗಲಿದೆ. ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಪಡೆಯಬಹುದು. ಈ ಬಗ್ಗೆ ರೈತ ಸಂಘದ ಪ್ರಮುಖರು ರೈತರ ಮನವೊಲಿಸಲು ಮುಂದಾಗಬೇಕು ಎಂದು ಪಿಐ ಕೆ.ಹೊಸಕೇರಪ್ಪ ಮನವಿ ಮಾಡಿದರು.