ಬಣ ರಾಜಕೀಯದಿಂದಲೇ ಕಾಂಗ್ರೆಸ್ಸಿಗೆ ಸೋಲು- ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿಕೆ

Devadurga Jagadish Shetter
ದೇವದುರ್ಗದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಸಮ್ಮುಖದಲ್ಲಿ ಮಾಜಿ ಶಾಸಕ ಶರಣಪ್ಪಗೌಡ ಅಂಚೆಸೂಗೂರ ಪುತ್ರ ವಿ.ಮಲ್ಲಿಕಾರ್ಜುನ ಪಾಟೀಲ್, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ನಾಗರಾಳ ಮಲ್ಲಣ್ಣ ಸಾಹುಕಾರ ಗುರುವಾರ ಬಿಜೆಪಿ ಸೇರ್ಪಡೆಯಾದರು.
Published on

ದೇವದುರ್ಗ: ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಕೊಂಡಿದ್ದು, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 140 ಸ್ಥಾನಗಳನ್ನು ಪಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಕಾಂಗ್ರೆಸ್‌ಗೆ ದೇಶದಲ್ಲಿ ಹಾಗೂ ಜೆಡಿಎಸ್‌ಗೆ ರಾಜ್ಯದಲ್ಲಿ ನೆಲೆಯಿಲ್ಲ. ಕಾಂಗ್ರೆಸ್ಸಿನ ಹಲವಾರು ನಾಯಕರು ಅಧಿಕಾರಕ್ಕೆ ಬರುವುದಾಗಿ ಕನಸು ಕಾಣುತ್ತಿದ್ದು, ಸೂಟು, ಬೂಟು ಹೊಲಿಸಿಕೊಂಡಿದ್ದಾರೆ. ಬಣ ರಾಜಕೀಯದಿಂದಲೇ ಕಾಂಗ್ರೆಸ್ ಹೀನಾಯವಾಗಿ ಸೋಲಲಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ದೇಶದ ಭದ್ರತೆಗೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಂಡಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಶಿಸ್ತುಬದ್ಧವಾಗಿದೆ. ಪ್ರತಿಯೊಬ್ಬರಿಗೂ ಕರೊನಾ ವ್ಯಾಕ್ಸಿನ್ ನೀಡಿ ದೇಶದ ಜನರ ಜೀವ ಉಳಿಸಿದ್ದಾರೆ. ಹೀಗಾಗಿ ದೇಶದ ಜನರಿಗೆ ಮೋದಿ ಹಾಗೂ ಬಿಜೆಪಿ ಮೇಲೆ ಪ್ರೀತಿಯಿದೆ.

ಎಲ್ಲೆಡೆ ಬಿಜೆಪಿಯ ಅಲೆಯಿದ್ದು, ಪಕ್ಷದ ತತ್ವ, ಸಿದ್ಧಾಂತ ಮೆಚ್ಚಿ ಹಲವು ನಾಯಕರು ಬಿಜೆಪಿಗೆ ಬರುತ್ತಿದ್ದಾರೆ. ಹೀಗಾಗಿ ಬಿಜೆಪಿ ಜಗತ್ತಿನ ದೊಡ್ಡ ಪಕ್ಷವಾಗಿ ಬೆಳೆದಿದೆ ಎಂದರು.

ಮಾಜಿ ಶಾಸಕ ಶರಣಪ್ಪಗೌಡ ಅಂಚೆಸೂಗೂರ ಪುತ್ರ ವಿ.ಮಲ್ಲಿಕಾರ್ಜುನ ಪಾಟೀಲ್, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ನಾಗರಾಳ ಮಲ್ಲಣ್ಣ ಸಾಹುಕಾರ, ಹಿಂದುಳಿದ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ ಕರಿಗಾರ, ರಾಯಚೂರು ಕೃಷಿ ವಿವಿ ಆಡಳಿತ ಮಂಡಳಿ ಮಾಜಿ ಸದಸ್ಯ ಅಮರೇಶ ಬಲ್ಲದೇವ, ಟಿಎಪಿಸಿಎಂಎಸ್ ನಿರ್ದೇಶಕ ಕುಪ್ಪಿ ಶಿವನಗೌಡ ಪಾಟೀಲ್ ಬಿಜೆಪಿ ಸೇರ್ಪಡೆಯಾದರು. ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ಕೆ.ಶಿವನಗೌಡ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net