ಉದ್ಯೋಗ ಖಾತ್ರಿ ಯೋಜನೆ ರದ್ದತಿಗೆ ಹುನ್ನಾರ

Untitled design (39)
ನರಸಣ್ಣ ನಾಯಕ
Published on

ದೇವದುರ್ಗ: ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಬಂದ ನಂತರ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಸಿಪಿಎಂ(ಎಂ) ತಾಲೂಕು ಕಾರ್ಯದರ್ಶಿ ನರಸಣ್ಣ ನಾಯಕ ದೂರಿದರು.

ಪಟ್ಟಣದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಕಳೆದ 10 ವರ್ಷಗಳಲ್ಲಿ ರೈತರು, ಕೂಲಿಕಾರರು, ಬಡವರು ನಲುಗಿ ಹೋಗಿದ್ದಾರೆ. ದುಡಿಯುವ ವರ್ಗಗಳ ಹಕ್ಕು ಕಸಿಯಲಾಗುತ್ತಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಸರ್ವಾಧಿಕಾರ ಆಡಳಿತ ಸೃಷ್ಟಿಯಾಗಲಿದೆ ಎಂದರು.
ಪ್ರಜಾಪ್ರಭುತ್ವ ಉಳಿಯಬೇಕಾದರೆ ಮತದಾರರು ಇಂಡಿಯಾ ಕೂಟ ಬೆಂಬಲಿಸಬೇಕಿದೆ. ಯುಪಿಎ ಅಧಿಕಾರದ ಅವಧಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ 96 ಸಾವಿರ ಕೋಟಿ ರೂ. ಮೀಸಲಿಡಲಾಗಿತ್ತು. ಎನ್‌ಡಿಎ ಅಧಿಕಾರಕ್ಕೆ ಬಂದ ಮೇಲೆ 46 ಸಾವಿರ ಕೋಟಿ ರೂ.ಗೆ ಇಳಿಕೆ ಮಾಡಲಾಗಿದೆ. ಹಂತಹಂತವಾಗಿ ಅನುದಾನ ಕಡಿತಗೊಳಿಸಿ ಖಾತ್ರಿ ಯೋಜನೆಯನ್ನು ರದ್ದುಗೊಳಿಸಿಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.


ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಜನತೆಗೆ ಕೊಟ್ಟ ಮಾತನ್ನು ಈಡೇರಿಸದೆ ವಚನ ಭ್ರಷ್ಟವಾಗಿದೆ. ಧರ್ಮದ ಹೆಸರಿನಲ್ಲಿ ಭಾವನಾತ್ಮಕವಾಗಿ ಹೇಳಿಕೆ ನೀಡುತ್ತ ಜನರ ದಿಕ್ಕು ತಪ್ಪಿಸಲಾಗುತ್ತಿದೆ. ಇದರಿಂದ ಯುವ ಜನತೆ ದಾರಿ ತಪ್ಪುತ್ತಿದ್ದಾರೆ ಎಂದು ನರಸಣ್ಣ ನಾಯಕ ಆರೋಪಿಸಿದರು. ಪ್ರಮುಖರಾದ ಗಿರಿಯಪ್ಪ ಪೂಜಾರಿ, ಶಬ್ಬೀರ್ ಜಾಲಹಳ್ಳಿ, ಮುಕ್ಕಣ್ಣಗೌಡ, ಹನುಮಂತ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net