

ದೇವದುರ್ಗ: ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಹಾಕುವುರಿಂದ ನಾನಾ ರೋಗ ಆವರಿಸುವ ಜತೆಗೆ ಆರ್ಥಿಕ ಹೊರೆ ಬೀಳಲಿದೆ. ರೋಗ ರಹಿತ ಹಾಗೂ ಕಡಿಮೆ ಖರ್ಚಿನಲ್ಲಿ ಎರೆಹುಳು ಹಾಗೂ ದನದ ಗೊಬ್ಬರ ಬಳಸಿದರೆ ಉತ್ತಮ ಇಳುವರಿ ಬರಲಿದೆ ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿವಿ ನಿವೃತ್ತ ಡೀನ್ ಡಾ.ಎಂ.ಭೀಮಣ್ಣ ತಿಳಿದರು.
ಪಟ್ಟಣದ ಬಿಎಚ್ ಕಲ್ಯಾಣ ಮಂಟಪದಲ್ಲಿ ತಾಲೂಕು ಕೃಷಿಕ ಸಮಾಜ, ಕೃಷಿ ಇಲಾಖೆ, ರಾಯಚೂರು ಕೃಷಿ ವಿಜ್ಞಾನಗಳ ವಿವಿ, ಕೃಷಿ ತಂತ್ರಜ್ಞಾನ ಸಂಸ್ಥೆ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ, ಕಿಸಾನ್‌ಗೋಷ್ಠಿ ಹಾಗೂ ಮೆಣಸಿನಕಾಯಿ ಬೇಸಾಯ ತರಬೇತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ರೈತರು ಮಿಶ್ರಬೆಳೆ ಪದ್ಧತಿ ಅನುಸರಿಸಬೇಕು. ಅದರ ಜತೆಗೆ ಕುರಿ ಸಾಕಣೆ, ಕೋಳಿ ಹಾಗೂ ಜಾನುವಾರುಗಳ ಸಾಕಣೆ ಮಾಡಬೇಕು. ಇವುಗಳಿಂದ ಪರ್ಯಾಯ ಆದಾಯದ ಜತೆ ಗೊಬ್ಬರ ಸಿಗಲಿದೆ ಎಂದರು.
ಕೀಟಶಾಸ್ತ್ರಜ್ಞ ಡಾ.ಅರುಣ್‌ಕುಮಾರ ಹೊಸಮನಿ ಮಾತನಾಡಿ, ಮೆಣಸಿನಕಾಯಿ ಬೆಳೆಯಲ್ಲಿ ಬ್ಲಾಕ್‌ಟ್ರಿಪ್, ಎಲೆಮುದುರುವ ರೋಗ ಹೆಚ್ಚಾಗಿ ಕಾಡುತ್ತಿದ್ದು, ತಜ್ಞರ ಸಲಹೆ ಪಡೆದು ಕ್ರಿಮಿನಾಶಕ ಸಿಂಪಡಿಸಬೇಕು. ಎರೆಹುಳು ಗೊಬ್ಬರ ತಯಾರಿಕೆಗೆ ರೈತರು ಆದ್ಯತೆ ನೀಡಬೇಕಿದೆ. ಇದರಿಂದ ಹೊಲದಲ್ಲಿ ಕಳೆ, ಕಸದ ಸಮಸ್ಯೆ ನಿವಾರಣೆಯಾಗಲಿದೆ ಎಂದು ತಿಳಿಸಿದರು.
ರೋಗ ಶಾಸ್ತ್ರಜ್ಞ ಅಜಿತ್‌ಕುಮಾರ ಮಾತನಾಡಿದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಸಿದ್ದಾರೆಡ್ಡಿ, ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಬಸವರಾಜ ಪಾಟೀಲ್ ಗೌರಂಪೇಟೆ, ವಿಷಯ ತಜ್ಞ ಡಾ.ಕೃಷ್ಣ ಎ.ಬಿರಾದಾರ್ ಪಾಟೀಲ್, ಶಿವಪ್ಪ, ವೇಣುಗೋಪಾಲ್ ಇತರರಿದ್ದರು.