

ದೇವದುರ್ಗ: ರಾಯಚೂರು ನಗರದ ಜನರಿಗೆ ಸಮರ್ಪಕವಾಗಿ ಕುಡಿವ ನೀರು ಒದಗಿಸಲು ಕೃಷ್ಣಾ ನದಿಯಿಂದ ಎನ್.ಗಣೇಕಲ್ ಗ್ರಾಮದ ಬಂಗಾರಪ್ಪ ಕೆರೆಯಿಂದ ನೀರು ಲಿಫ್ಟ್ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ತಾಲೂಕಿನ ಕೃಷ್ಣಾ ನದಿ ಹತ್ತಿರದ ಅಪ್ರಾಳ ಜಾಕ್‌ವೆಲ್‌ಗೆ ಭೇಟಿ ನೀಡಿ ಶನಿವಾರ ಮಾತನಾಡಿದರು. ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸಿ ಕೆರೆ ತುಂಬಿಸಿ ನಂತರ ಪೂರೈಕೆ ಮಾಡಲಾಗುತ್ತಿದೆ. ಆದರೆ, ಈ ನೀರು ಸಾಲುತ್ತಿಲ್ಲ. ಅಲ್ಲದೆ ತುಂಗಭದ್ರಾ ಎಡದಂಡೆ ನಾಲೆಯಿಂದ ಕೆರೆಗೆ ನೀರು ತುಂಬಿಸುವುದು ಕಷ್ಟದ ಕೆಲಸದ ಜತೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಕೆರೆಗೆ ಕೃಷ್ಣಾ ನದಿ ಸಮೀಪವಾಗಿರುವ ಕಾರಣ, ಅಲ್ಲಿಂದ ನೀರು ತುಂಬಿಸಲಾಗುವುದು ಎಂದರು.
ಕಳೆದ ವರ್ಷ ನದಿ ದಂಡೆ ಗ್ರಾಮ ಅಪ್ರಾಳದಲ್ಲಿ ಜಾಕ್‌ವೆಲ್ ನಿರ್ಮಿಸಿ ಅಲ್ಲಿಂದ ಬಂಗಾರಪ್ಪ ಕೆರೆಗೆ ಲಿಫ್ಟ್ ಮಾಡಲು ಪೈಪ್‌ಲೈನ್ ಕಾಮಗಾರಿ ಕೈಗೊಂಡಿದ್ದು ಕೆಲಸ ಪೂರ್ಣಗೊಂಡಿದೆ. ಎನ್.ಗಣೇಕಲ್ ಗ್ರಾಮದ ಕೆರೆ ಕೂಡ ವೀಕ್ಷಿಸಲಾಗಿದೆ. ಶೀಘ್ರದಲ್ಲಿ ತುಂಗಭದ್ರಾ ನದಿ ನೀರಿನ ಜತೆಗೆ ರಾಯಚೂರಿನ ಜನರಿಗೆ ಕೃಷ್ಣಾ ನದಿ ನೀರು ಕೂಡ ಪೂರೈಕೆ ಮಾಡಲಾಗುವುದು. ಕೆರೆ ಅಭಿವೃದ್ಧಿಗೆ ಕಾಳಜಿ ವಹಿಸಿದ್ದು, ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬೇಸಿಗೆ ಸೇರಿ ಯಾವುದೇ ಸಮಯದಲ್ಲೂ ಕುಡಿವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಸಚಿವ ಶರಣಪ್ರಕಾಶ ಪಾಟೀಲ್ ತಿಳಿಸಿದರು.
ಎನ್.ಗಣೇಕಲ್ ಗ್ರಾಮದ ಬಂಗಾರಪ್ಪ ಕೆರೆ ವೀಕ್ಷಣೆ ಬಳಿಕ ಅಧಿಕಾರಿಗಳ ಸಭೆ ನಡೆಸಿದರು. ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ಎಂಎಲ್‌ಸಿ ಎ.ವಸಂತಕುಮಾರ, ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ತಾಪಂ ಇಒ ಬಸವರಾಜ ಹಟ್ಟಿ, ಹೆಚ್ಚುವರಿ ಎಸ್ಪಿ ಆರ್.ಶಿವಕುಮಾರ, ಸಿಪಿಐ ಗುಂಡೂರಾವ್, ಪಿಎಸ್‌ಐ ಗಳಾದ ಗಂಗಪ್ಪ ಬುರ‌್ಲಿ, ಸುಜಾತ ಇತರರಿದ್ದರು.