

ದೇವದುರ್ಗ: ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ದಲಿತ ಸಂಘಟನೆಗಳ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿನಿಯರು ಪಟ್ಟಣದ ಮಿನಿವಿಧಾನಸೌಧಕ್ಕೆ ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಹಾಸ್ಟೆಲ್‌ನಲ್ಲಿ ಹಲವು ಸಮಸ್ಯೆಗಳಿವೆ. ಇದರಿಂದ ವಿದ್ಯಾಭ್ಯಾಸಕ್ಕೆ ತೀವ್ರ ಹಿನ್ನಡೆಯಾಗುತ್ತಿದೆ. ಶುದ್ಧ ಕುಡಿವ ನೀರಿನ ವ್ಯವಸ್ಥೆ ಇಲ್ಲದೆ ಕಲುಷಿತ ನೀರು ಕುಡಿದು ಅನಾರೋಗ್ಯಕ್ಕೆ ತುತ್ತಾಗುವಂತಾಗಿದೆ. ಮೆನು ಪ್ರಕಾರ ಉಪಾಹಾರ ಹಾಗೂ ಊಟ ವಿತರಣೆ ಮಾಡುತ್ತಿಲ್ಲ. ಮೊಟ್ಟೆ, ಬಾಳೆಹಣ್ಣು ಸರಿಯಾಗಿ ನೀಡುತ್ತಿಲ್ಲ. ದಿನಪತ್ರಿಕೆ, ಪುಸ್ತಕವಿಲ್ಲದೆ ಕಲಿಕೆಗೆ ಹಿನ್ನಡೆಯಾಗುತ್ತಿದೆ ಎಂದು ಆರೋಪಿಸಿದರು.
ಕೂಡಲೇ ಹಾಸ್ಟೆಲ್‌ಗೆ ಶುದ್ಧ ಕುಡಿವ ನೀರು ಪೂರೈಕೆ ಮಾಡಬೇಕು. ಮೆನು ಪ್ರಕಾರ ಉಪಾಹಾರ ಹಾಗೂ ಊಟ ವಿತರಣೆ ಮಾಡಬೇಕು. ಮೊಟ್ಟೆ ಹಾಗೂ ಬಾಳಹೆಣ್ಣು ನಿಯಮಿತವಾಗಿ ಕೊಡಬೇಕು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದಿನಪತ್ರಿಕೆ, ವಾರಪತ್ರಿಕೆ, ಸ್ಪರ್ಧಾತ್ಮಕ ಪತ್ರಿಕೆ ಹಾಗೂ ವಿವಿಧ ಪುಸ್ತಕಗಳನ್ನು ವಿತರಣೆ ಮಾಡಬೇಕು. ಸ್ವಚ್ಛತೆ ಕಾಪಾಡುವ ಜತೆಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ದಲಿತ ಸಂಘಟನೆಗಳ ಮುಖಂಡರಾದ ಶಿವಪ್ಪ ಪಲಕನಮರಡಿ, ಬಸವರಾಜ ಹುಲಿಗುಡ್ಡ, ವಿದ್ಯಾರ್ಥಿಗಳಾದ ಆರ್.ಪದ್ಮಾ, ಆರ್.ಕವಿತಾ, ಜಿ.ಗಾಯತ್ರಿ, ನೀಲಮ್ಮ, ಕವಿತಾ, ಸೋನಮ್ಮ, ಜ್ಯೋತಿಲಕ್ಷ್ಮೀ, ಸ್ನೇಹಾ, ಸಂಜನಾ, ಅನಿತಾ, ಜ್ಯೋತಿ ಜಾಧವ್, ಗಾಯತ್ರಿ, ಸಂಗೀತಾ, ಶಾರದಾ, ರೇಣುಕಮ್ಮ, ಚೈತ್ರಾ, ಲಲಿತಾ, ಆರ್.ಸಂಗೀತಾ ಇತರರಿದ್ದರು.