

ದೇವದುರ್ಗ: ಅತಿವೃಷ್ಟಿ, ಅನಾವೃಷ್ಟಿಯಿಂದ ಬಳಲಿದ ರೈತರಿಗೆ ಹತ್ತಿ ಬೆಲೆ ಇಳಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ತಕ್ಷಣ ಹತ್ತಿ ಖರೀದಿ ಕೇಂದ್ರ ಆರಂಭಿಸಬೇಕು. ನಿರ್ಲಕ್ಷ್ಯ ಮಾಡಿದರೆ ಜ.9ರಂದು ಸಾವಿರಾರು ರೈತರೊಂದಿಗೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಜೆಡಿಎಸ್ ಕಲ್ಯಾಣ ಕರ್ನಾಟಕ ವಿಭಾಗದ ವೀಕ್ಷಕಿ ಕರೆಮ್ಮ ಜಿ.ನಾಯಕ ಎಚ್ಚರಿಸಿದರು.
ಮಧ್ಯವರ್ತಿಗಳ ಹಾವಳಿ, ಸರ್ಕಾರದ ಅವೈಜ್ಞಾನಿಕ ನೀತಿಯಿಂದ ಹತ್ತಿ ಬೆಲೆ ದಿಢೀರ್ ಕುಸಿತಗೊಂಡಿದೆ. ಬೇರೆ ರಾಜ್ಯದಲ್ಲಿ ಉತ್ತಮ ಬೆಲೆಯಿದ್ದು, ರಾಜ್ಯದಲ್ಲಿ ಮಾತ್ರ ಇಳಿಕೆಯಾಗಿದೆ. ಸರ್ಕಾರ ಮಧ್ಯಪ್ರವೇಶಿಸಿ ಕ್ವಿಂಟಾಲ್‌ಗೆ 12ಸಾವಿರ ರೂ. ಬೆಂಬಲ ಬೆಲೆಯೊಂದಿಗೆ ಖರೀದಿಸುವಂತೆ ಆಗ್ರಹಿಸಿ ಜ.9ರಂದು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಮಿನಿವಿಧಾನಸೌಧವರೆಗೆ ಸಾವಿರಾರು ರೈತರೊಂದಿಗೆ ಪ್ರತಿಭಟನಾ ರ‌್ಯಾಲಿ ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
ಆಂಧ್ರ ಪ್ರದೇಶ, ತೆಲಂಗಾಣ ಇತರೆಡೆ ಹತ್ತಿ ಬೆಲೆ ಉತ್ತಮವಾಗಿದೆ. ಆದರೆ, ರಾಜ್ಯದಲ್ಲಿ ದಲ್ಲಾಳಿಗಳ ಹಾವಳಿಯಿಂದ ಬೆಲೆ ಕುಸಿದಿದೆ. ಕ್ವಿಂಟಾಲ್‌ಗೆ 7500-8000ರೂ. ಇಳಿಕೆಯಾಗಿದ್ದು, ಇದರಿಂದ ರೈತರಿಗೆ ಮಾಡಿದ ಖರ್ಚು ಬಾರದ ಸ್ಥಿತಿಯಿದೆ. ಸರ್ಕಾರ ಬೆಳೆ ಮಾರಾಟವಾದ ಮೇಲೆ ತೊಗರಿ, ಕಡಲೆ, ಹತ್ತಿ ಖರೀದಿ ಕೇಂದ್ರ ತೆರೆಯುತ್ತದೆ. ಇದು ದಲ್ಲಾಳಿಗಳಿಗೆ ಅನುಕೂಲ ಆಗಲಿದ್ದು, ರೈತರಿಗೆ ಯಾವುದೇ ಬೆಲೆ ಸಿಗುತ್ತಿಲ್ಲ ಎಂದು ದೂರಿದರು.
ತಾಲೂಕು ಅಧ್ಯಕ್ಷ ಬುಡ್ಡನಗೌಡ ಜಾಗಟಗಲ್, ಪ್ರಮುಖರಾದ ಅಮರೇಶ ಪಾಟೀಲ್, ಶರಣಪ್ಪ ಬಳೆ, ಬಸವರಾಜ ಕೊತ್ತದೊಡ್ಡಿ, ಮಯೂರ ಸ್ವಾಮಿ, ಹನುಮಂತ್ರಾಯ ವಕೀಲ ಚಿಂತಲಕುಂಟಾ, ದೊಡ್ಡ ರಂಗಣ್ಣ ಅಳ್ಳುಂಡಿ, ಚಂದ್ರ ಚಿಂತಲಕುಂಟಿ ಇತರರಿದ್ದರು.