ದೇವದುರ್ಗದಲ್ಲಿ ಹತ್ತಿ ಖರೀದಿ ಕೇಂದ್ರ ಆರಂಭಿಸಿ; ಕರ್ನಾಟಕ ರೈತ ಸಂಘ ಒತ್ತಾಯ

08112022 devadurga cotton news
Published on

ದೇವದುರ್ಗ: ನಾರಾಯಣಪುರ ಬಲದಂಡೆ ನಾಲೆ ಹಾಗೂ ಕೃಷ್ಣಾ ನದಿ ವ್ಯಾಪ್ತಿಯಲ್ಲಿ ರೈತರು ಅಪಾರ ಪ್ರಮಾಣದಲ್ಲಿ ಹತ್ತಿ ಬೆಳೆದಿದ್ದು, ಸೂಕ್ತ ಬೆಲೆಯಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಬೆಂಬಲ ಬೆಲೆಯೊಂದಿಗೆ ಖರೀದಿ ಕೇಂದ್ರ ಆರಂಭಿಸಿ ಕೃಷಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ಎಪಿಎಂಸಿ ಕಾರ್ಯದರ್ಶಿ ರಂಗನಾಥಗೆ ಕರ್ನಾಟಕ ರೈತ ಸಂಘ ಮಂಗಳವಾರ ಮನವಿ ಸಲ್ಲಿಸಿತು.

ಹತ್ತಿ ಬೆಲೆ ಕುಸಿದಿರುವುದು ರೈತರಲ್ಲಿ ಆತಂಕ ತಂದಿದೆ. ಎರಡು ತಿಂಗಳ ಹಿಂದೆ ಕ್ವಿಂಟಾಲ್‌ಗೆ 9 ಸಾವಿರ ರೂ. ಇದ್ದ ಬೆಲೆ ಸದ್ಯ 7500 ರೂ.ಗೆ ಕುಸಿದಿದೆ. ಹತ್ತಿ ಮಿಲ್‌ನಲ್ಲಿ ಮೂರು ಕೆಜಿ ಸೂಟ್ ಮುರಿಯುವ ಮೂಲಕ ಅನ್ಯಾಯ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ಭಾರಿ ನಷ್ಟವಾಗುತ್ತಿದೆ ಎಂದು ಆರೋಪಿಸಿದರು.

ಕೂಡಲೇ ಬೆಂಬಲ ಬೆಲೆಯೊಂದಿಗೆ ಹತ್ತಿ, ತೊಗರಿ ಖರೀದಿ ಕೇಂದ್ರ ಆರಂಭಿಸಬೇಕು. ತಾಲೂಕಿನಲ್ಲಿ 15ಹತ್ತಿ ಮಿಲ್‌ಗಳಿದ್ದು, ಎಲ್ಲ ಕೇಂದ್ರಗಳಿಗೆ ಭೇಟಿ ನೀಡಿ ತೂಕದ ಯಂತ್ರ ಪರಿಶೀಲಿಸಿ ಸೂಟ್ ಮುರಿಯದಂತೆ ಸೂಚನೆ ನೀಡಬೇಕು. ಎಲ್ಲ ಮಿಲ್‌ಗಳಲ್ಲಿ ಒಂದೇ ಬೆಲೆ ನಿಗದಿ ಮಾಡಿ ಮಿಲ್ ಮಾಲೀಕರಿಗೆ ಸೂಚನೆ ನೀಡಬೇಕು. ಕೃಷಿ ಮಾರುಕಟ್ಟೆಯಲ್ಲಿ ಸಾರ್ವಜನಿಕರು ಹಾಗೂ ದನಗಳಿಗೆ ಕುಡಿವ ನೀರಿನ ಸೌಲಭ್ಯ ಕಲ್ಪಿಸಬೇಕು. ಮಾರುಕಟ್ಟೆಯಲ್ಲಿ ದರಪಟ್ಟಿ ನಾಮಫಲಕ ಹಾಕಬೇಕು. ಎಪಿಎಂಸಿ ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಒತ್ತಾಯಿಸಿದರು.

ತಾಲೂಕು ಅಧ್ಯಕ್ಷ ಕೆ.ಗಿರಿಲಿಂಗ ಸ್ವಾಮಿ, ಪ್ರಧಾನ ಕಾರ್ಯದರ್ಶಿ ದುರುಗಣ್ಣ ಇರಬಗೇರಾ, ಸಹ ಕಾರ್ಯದರ್ಶಿ ಸಿದ್ದಲಿಂಗಪ್ಪ ಜೇರಬಂಡಿ, ಪ್ರಮುಖರಾದ ಗಂಗಣ್ಣ ಎನ್.ಗಣೇಕಲ್, ಮಲ್ಲೇಶ ಎನ್.ಗಣೇಕಲ್, ರಮೇಶ, ಶರಣಪ್ಪ, ಶ್ರೀನಿವಾಸ್ ಕೊಪ್ಪರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net