ಕರೊನಾ ಎರಡನೇ ಅಲೆ ತಡೆಗೆ ಸಹಕರಿಸುವಂತೆ ತಾಲೂಕು ವೈದ್ಯಾಧಿಕಾರಿ ಡಾ.ಬನದೇಶ್ವರ ಅಧಿಕಾರಿಗಳಿಗೆ ಮನವಿ

Devadurga Corona Awarness Meeting
ದೇವದುರ್ಗ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಹನುಮಗೌಡ ಶಂಕರಬಂಡಿ ಅಧ್ಯಕ್ಷತೆಯಲ್ಲಿ ಕರೊನಾ ತಡೆಗೆ ಜಾಗೃತಿ ಸಭೆ ನಡೆಯಿತು.
Published on

ದೇವದುರ್ಗ: ರಾಜ್ಯದ ವಿವಿಧೆಡೆ ಕರೊನಾ 2ನೇ ಅಲೆ ಅಪ್ಪಳಿಸುವ ಆತಂಕ ಎದುರಾಗಿದೆ. ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸದಸ್ಯರು ಎಚ್ಚರವಹಿಸಿ ಆರೋಗ್ಯ ಇಲಾಖೆಗೆ ಸಹಕಾರ ನೀಡಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ.ಬನದೇಶ್ವರ ತಿಳಿಸಿದರು.

ಪುರಸಭೆ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆಡಳಿತ ಆಯೋಜಿಸಿದ್ದ ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸದಸ್ಯರ ಜಾಗೃತಿ ಸಭೆಯಲ್ಲಿ ಬುಧವಾರ ಮಾತನಾಡಿದರು.

ಪಟ್ಟಣ ಸೇರಿ ತಾಲೂಕಿನ ಜನರಿಗೆ ಕರೊನಾ ಬಗ್ಗೆ ಜಾಗೃತಿ ಮೂಡಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿ 6 ಅಡಿ ದೈಹಿಕ ಅಂತರ ಕಾಪಾಡಿಕೊಳ್ಳುವಂತೆ ಸೂಚಿಸಬೇಕು. ಸರ್ಕಾರಿ ಕಚೇರಿ, ಸಂಘ-ಸಂಸ್ಥೆಗಳ ಆಫೀಸು, ಅಂಗಡಿ-ಮುಂಗಟ್ಟು ಹಾಗೂ ವ್ಯಾಪಾರಿ ಮಳಿಗೆಗಳಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್ ವ್ಯವಸ್ಥೆ ಕೈಗೊಳ್ಳಬೇಕು. ಈ ಬಗ್ಗೆ ಪುರಸಭೆ ಆಡಳಿತ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಪ್ರತಿ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಕನಿಷ್ಠ 20 ಜನರಿಗೆ ವ್ಯಾಕ್ಸಿನ್ ಹಾಕಿಸಬೇಕು. ಈ ಬಗ್ಗೆ ಪುರಸಭೆ ಕಸ ವಿಲೇವಾರಿ ವಾಹನದಲ್ಲಿ ಜಾಗೃತಿ ಬ್ಯಾನರ್ ಅಳವಡಿಸುವ ಜತೆಗೆ ಧ್ವನಿವರ್ಧಕ ಮೂಲಕ ಕರೊನಾ ಹಾಗೂ ಲಸಿಕೆ ಕುರಿತು ಅರಿವು ಮೂಡಿಸಬೇಕು ಎಂದರು.

ರೋಗ ತಡೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಉಚಿತವಾಗಿ ಹಾಕಲಾಗುತ್ತಿದ್ದು, ಸಾರ್ವಜನಿಕರು ಇದರ ಅನುಕೂಲ ಪಡೆದುಕೊಳ್ಳಬೇಕು. ಮೊದಲ ಡೋಸ್ ಪಡೆದು 28ನೇ ದಿನಕ್ಕೆ ಎರಡನೇ ವ್ಯಾಕ್ಸಿನ್ ಪಡೆಯಬೇಕು ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷ ಹನುಮಗೌಡ ಬಡಿಗೇರ್ ಶಂಕರಬಂಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ಶರಣಪ್ಪ, ವ್ಯವಸ್ಥಾಪಕ ಗಂಗಾಧರ್, ಪುರಸಭೆ ಸದಸ್ಯರಾದ ಶರಣಗೌಡ, ಖಾಜಾಹುಸೇನ್, ಚಂದ್ರಶೇಖರ್ ಕುಂಬಾರ್, ಮಾನಪ್ಪ ಮೇಸ್ತ್ರಿ, ನಾಗರಾಜ ಗೋಗಿ, ಚಂದ್ರಕಾಂತ್ ಬಿಲ್ಲವ, ಚಂದ್ರಶೇಖರ್ ಚೆಲುವಾದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net