ಅಣ್ಣನ ಆಶ್ರಯದಿಂದ ನಾವಿನ್ನು ಸ್ವತಂತ್ರ

Rajashekar Nayak
Published on

ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜಶೇಖರ ನಾಯಕ ಹೇಳಿಕೆ

ದೇವದುರ್ಗ: ತಾಲೂಕಿನಲ್ಲಿ ಕಾಂಗ್ರೆಸ್‌ಗೆ ನಿಷ್ಠಾವಂತ, ಸ್ವಾಭಿಮಾನಿ ಕಾರ್ಯಕರ್ತರ ಪಡೆಯಿದೆ. ಕೆಲ ಮುಖಂಡರು ಪಕ್ಷ ತೊರೆದರೆ ಕಾಂಗ್ರೆಸ್‌ಗೆ ಯಾವುದೇ ನಷ್ಟವಾಗಲ್ಲ ಎಂದು ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ನನಗೆ ಇದುವರೆಗೆ ತಂದೆ, ಮಾಜಿ ಸಂಸದ ಎ.ವೆಂಕಟೇಶ ನಾಯಕ ಮತ್ತು ಅಣ್ಣ, ಮಾಜಿ ಸಂಸದ ಬಿ.ವಿ.ನಾಯಕ ಆಶ್ರಯ ಹಾಗೂ ಅವಲಂಬನೆ ಇತ್ತು. ಈಗ ನಾವು ಸ್ವತಂತ್ರರಾಗಿದ್ದೇವೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಕುರಿತು ಊಹಾಪೋಹಗಳನ್ನು ಸೃಷ್ಟಿಸಲಾಗುತ್ತಿದೆ. ಶ್ರೀದೇವಿ ನಾಯಕ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದರು. ಬಿ.ವಿ.ನಾಯಕ ಯಾವ ಕಾರಣಕ್ಕೆ ಬಿಜೆಪಿಗೆ ಹೋಗಿದ್ದಾರೆ ಗೊತ್ತಿಲ್ಲ. ಆದರೆ ನಾನು ಹಾಗೂ ನನ್ನ ಪತ್ನಿ ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿಗಳಾಗಿದ್ದೇವೆ. ಬಿ.ವಿ.ನಾಯಕ ಬಿಜೆಪಿಗೆ ಹೋಗಿರುವುದರಿಂದ ನಮಗೆ ಭಯವಿಲ್ಲ. ಕ್ಷೇತ್ರದಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಬಂದರೂ ನಾವು ಜಗ್ಗುವದಿಲ್ಲ.

ಕ್ಷೇತ್ರದಲ್ಲಿ ಕಳೆದ ಆರು ತಿಂಗಳಿನಿಂದ ಜೆಡಿಎಸ್ ಮತ್ತು ಬಿಜೆಪಿ ಗೊಂದಲ ಸೃಷ್ಟಿಸಿವೆ. ತಾಲೂಕಿನಲ್ಲಿ ಕಾಂಗ್ರೆಸ್‌ಗೆ ಸಾಂಪ್ರದಾಯಿಕ ಸುಮಾರು 40 ಸಾವಿರ ಮತಗಳಿವೆ. ತೀವ್ರ ಸ್ಪರ್ಧೆ ಇದ್ದರೂ ಬಿಜೆಪಿ ಮತ್ತು ಜೆಡಿಎಸ್‌ಗೆ ತಕ್ಕ ಉತ್ತರ ನೀಡುತ್ತೇವೆ ಎಂದರು. ಪುರಸಭೆ ಅಧ್ಯಕ್ಷ ಶರಣಗೌಡ ಬಕ್ರಿ ಗೌರಂಪೇಟೆ, ತಾಲೂಕು ಅಧ್ಯಕ್ಷ ಅಬ್ದುಲ್ ಅಜೀಜ್, ನಗರ ಘಟಕದ ಅಧ್ಯಕ್ಷ ಪ್ರಕಾಶ ಪಾಟೀಲ್ ಅಮರಾಪುರ, ಪುರಸಭೆ ಮಾಜಿ ಅಧ್ಯಕ್ಷ ರಂಗಪ್ಪ ಗೋಸುಲ್, ಮುಖಂಡರಾದ ಬಾಪೂಗೌಡ ಪಾಟೀಲ್ ಹೊನ್ನಕುಣಿ, ಶಂಕ್ರಪ್ಪ ಬಂಡೇಗುಡ್ಡ, ವೀರೇಶಗೌಡ ಹೂವಿನಹೆಡಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net