ಕೈ ಮನೆಯಲ್ಲಿ ಭುಗಿಲೆದ್ದ ಅಸಮಾಧಾನ

Untitled design (3)
Published on

ದೇವದುರ್ಗ: ತಾಲೂಕು ಕಾಂಗ್ರೆಸ್ ಮನೆಯಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದ್ದು ನಾಯಕರ ವಿರುದ್ಧವೇ ಕೈ ಕಾರ್ಯಕರ್ತರು ಬಹಿರಂಗ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೂಡಿದ್ದ ಬಣರಾಜಕೀಯ ಇನ್ನೂ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಸದ್ಯ ಜಿಲ್ಲಾಧ್ಯಕ್ಷ, ಬ್ಲಾಕ್ ಅಧ್ಯಕ್ಷರು ಒಂದುಕಡೆಯಾದರೆ. ಎ.ವೆಂಕಟೇಶ ನಾಯಕ ಕುಟುಂಬ ಹಾಗೂ ಬೆಂಬಲಿಗರು ನಾವೊಂದುಕಡೆ ಎನ್ನುತ್ತಿದ್ದಾರೆ.

ಜಾಲಹಳ್ಳಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಬೆಂಬಲಿತ ಮೂವರು ಸದಸ್ಯರು ಬಿಜೆಪಿಗೆ ಬೆಂಬಲಿಸಿದ್ದರು. ಕೈ ಅಧಿಕಾರ ಹಿಡಿಯಲು ಸರಳ ಬಹುಮತವಿದ್ದರೂ ಬಣರಾಜಕೀಯದಿಂದ ಅಧಿಕಾರ ಕಳೆದುಕೊಂಡಿತ್ತು. ಇದರಿಂದ ಕೆರಳಿದ ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷ ಆದನಗೌಡ ಬುಂಕಲದೊಡ್ಡಿ, ಮೂವರು ಸದಸ್ಯರು ಸೇರಿ ನಾಲ್ಕೈದು ನಾಯಕರ ವಿರುದ್ಧ ಕ್ರಮಕೈಗೊಂಡು ಉಚ್ಛಾಟನೆ ಮಾಡುವಂತೆ ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ್ ಇಟಗಿಗೆ ಪತ್ರಬರೆದಿದ್ದಾರೆ.

ಇದರಿಂದ ಸಿಡಿದೆದ್ದ ಜಾಲಹಳ್ಳಿ ಹೋಬಳಿ ನಾಯಕರು ಹಾಗೂ ಮಾಜಿ ಸಂಸದ ದಿ.ಎ.ವೆಂಕಟೇಶ ನಾಯಕ ಬೆಂಬಲಿಗರು ಬಂಡಾಯ ಸಭೆ ಮಾಡಿದ್ದರು. ಈಗ ಒಂದು ಹೆಜ್ಜೆ ಮುಂದೆ ಹೋದ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಾಲೂಕು ಅಧ್ಯಕ್ಷ ಆದನಗೌಡ ಬುಂಕಲದೊಡ್ಡಿ, ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ್ ಇಟಗಿ ವಿರುದ್ಧ ಟೀಕೆ ಮಾಡುತ್ತಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿದ್ದೂ ಕೈ ಅಭ್ಯರ್ಥಿಗೆ ಮೋಸ ಮಾಡಿ ಬೆಂಬಲಿಗರೊಂದಿಗೆ ಜೆಡಿಎಸ್‌ಗೆ ಸೇರಿ ಪಕ್ಷಕ್ಕೆ ಮೋಸ ಮಾಡಿದ್ದೀರಿ ಎಂದು ಆದನಗೌಡ ಬುಂಕಲದೊಡ್ಡಿ ವಿರುದ್ಧ ಪತ್ರ ಬರೆದಿದ್ದಾರೆ. ಅಲ್ಲದೆ ಬಸವರಾಜ ಪಾಟೀಲ್ ಇಟಗಿ ಸದಾ ಪಕ್ಷ ವಿರೋಧಿ ಕೆಲಸ ಮಾಡುತ್ತಿದ್ದು ದಿ.ಎ.ವೆಂಕಟೇಶ ನಾಯಕ ಹಾಗೂ ಅವರ ಕುಟುಂಬಕ್ಕೆ ದ್ರೋಹ ಬಗೆದಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದುಮಾಡುತ್ತಿದ್ದು ಕೈ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮೊದಲು ಪಕ್ಷನಿಷ್ಠೆ ಕಲಿಯಿರಿ ನಂತರ ಶಿಸ್ತುಕ್ರಮ ಕೈಗೊಳ್ಳುವರಂತೆ ಎಂದು ಕಾಲೆಳೆದಿದ್ದಾರೆ. ಇತ್ತೀಚೆಗೆ ಮಾಜಿ ಸಂಸದ ಬಿ.ವಿ.ನಾಯಕ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಹಲವು ಕಾಂಗ್ರೆಸ್ ನಾಯಕರು ಭಾಗವಹಿಸಿ ಪಕ್ಷದ ವಿರುದ್ಧವೆ ತೊಡೆತಟ್ಟಿದ್ದು ಚರ್ಚೆಗೆ ಗ್ರಾಸವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net