

ಅರಕೇರಾ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೂ ಕಾರ್ಯಕರ್ತರನ್ನು ಯಾರೂ ಕೇಳುವವರಿಲ್ಲದಂತಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಭೀಮನಗೌಡ ನಾಗಡದಿನ್ನಿ ಆರೋಪಿಸಿದರು.
ಪಟ್ಟಣದ ಹೊರ ವಲಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾನುವಾರ ಮಾತನಾಡಿದರು. ಚುನಾವಣೆಯಲ್ಲಿ ಸೋಲು- ಗೆಲುವು ಸಾಮಾನ್ಯ. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರಾಜಿತಗೊಂಡ ನಂತರ ಸೌಜನ್ಯಕ್ಕಾದರೂ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಚಿಂತನ-ಮಂಥನ ಸಭೆ ಕರೆಯಲಿಲ್ಲ. ದಶಕಗಳ ಕಾಲ ಕಾಂಗ್ರೆಸ್‌ಗೆ ದುಡಿದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎಂದು ಕಿಡಿ ಕಾರಿದರು.
ಮೂಲ ಕಾರ್ಯಕರ್ತರನ್ನು ಕಡೆಗಣನೆ ಮಾಡುತ್ತಿರುವುದು ಹಿರಿಯ ನಾಯಕರ ಗಮನಕ್ಕಿದ್ದರೂ ಮೌನ ವಹಿಸಿದ್ದಾರೆ. ಇದರಿಂದ ಮುಂಬರುವ ತಾ.ಪಂ, ಜಿಪಂ ಹಾಗೂ ಲೋಕಸಭೆ ಚುನಾವಣೆಯಲ್ಲಿ ಸಮಸ್ಯೆಯಾಗಲಿದೆ. ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಳ್ಳುವವರು ಕಾಂಗ್ರೆಸ್ ತತ್ವ ಮತ್ತು ಸಿದ್ಧಾಂತ ಅರಿತು ನಡೆಯಬೇಕು. ತಳ ಹಂತದಿಂದ ಕಾಂಗ್ರೆಸ್ ಪಕ್ಷವನ್ನು ಬಲವರ್ಧನೆ ಮಾಡಿರುವ ಮನೆತನದವರಾಗಿರುವ ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕರ ಕಡೆಗಣನೆ ಸಲ್ಲ ಎಂದರು.
ಕ್ಷೇತ್ರದಲ್ಲಿ ಪಕ್ಷದಲ್ಲಿನ ಗೊಂದಲ ಸರಿಪಡಿಸಿಕೊಳ್ಳಲು ಸೆ.27 ರಂದು ದೇವದುರ್ಗದಲ್ಲಿ ಕಾರ್ಯಕರ್ತರ ಸಭೆ ಕರೆಯಲಾಗುವುದು. ಸಭೆಯಲ್ಲೂ ಸಮಸ್ಯೆ ಬಗೆಹರಿಯದಿದ್ದರೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಅವರ ಗಮನಕ್ಕೆ ತರಲಾಗುವುದು ಎಂದು ಭೀಮನಗೌಡ ನಾಗಡದಿನ್ನಿ ತಿಳಿಸಿದರು.
ಪ್ರಮುಖರಾದ ರಾಜು ಗೌಡ ಮುಷ್ಟೂರು, ಸುರೇಶ ನಾಯಕ ಚಿಂತಲಕುಂಟಾ, ಅಮರೇಗೌಡ ಕಮಲದಿನ್ನಿ, ಸುರೇಶ ಗೌಡ ಹಂಚಿನಾಳ, ಶರಣಪ್ಪ ನಾಯಕ ಹಿರೇರಾಯಕುಂಪಿ, ಹುಸೇನ್ ಬಾಷಾ ಖಾನಾಪುರ, ದುರುಗಪ್ಪ ನಾಯಕ, ಅಮರೇಶ ನಾಯಕ, ಶಿವಕುಮಾರ ಕಾಟಮಳ್ಳಿ, ನಾಗೇಂದ್ರ ಗುತ್ತೇದಾರ್, ಮುದುಕಪ್ಪ ಗೌಡ ಶಿವಂಗಿ, ಮಲ್ಲಯ್ಯ ನಾಯಕ ಅಡಕಲಗುಡ್ಡ, ನರಸಣ್ಣ ನಾಯಕ ಇತರರಿದ್ದರು.