

ದೇವದುರ್ಗ: ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೊಂದಿರುವ ದೇವದುರ್ಗದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿದ್ದೇನೆ. ಇದಕ್ಕೆ ಕ್ಷೇತ್ರದ ಮತದಾರರು ಸಹಕಾರ ನೀಡಿ ಕೈಜೋಡಿಸಬೇಕು ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.
ಇದನ್ನೂ ಓದಿ: ಆಮೆಗತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಂಪೌಂಡ್ ಹಾಗೂ ಹೈಮಾಸ್ಟ್ ದೀಪ ಅಳವಡಿಕೆ ಸೇರಿ ಸುಮಾರು 13ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ರಾಜ್ಯ ಸರ್ಕಾರದ ಅಸಹಕಾರದ ನಡುವೆ ಅನುದಾನ ತರಲು ಶಕ್ತಿಮೀರಿ ಶ್ರಮಿಸಿದ್ದೇನೆ. ಕೆಕೆಆರ್‌ಡಿಬಿಯಿಂದ 350 ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಸೀಮಿತ ಎರಡು ವರ್ಷಗಳ ಅವಧಿಯಲ್ಲಿ ವಿವಿಧ ಇಲಾಖೆಗಳ ಸಚಿವರು, ಅಧಿಕಾರಿಗಳನ್ನು ಭೇಟಿ ಮಾಡಿ ಒಂದು ಸಾವಿರ ಕೋಟಿ ರೂ.ಯಷ್ಟು ಅನುದಾನ ತರಲಾಗಿದೆ. ಪ್ರತಿಹಳ್ಳಿಗೂ ಕುಡಿವ ನೀರು, ಸಿಸಿ ರಸ್ತೆ, ಒಳಚರಂಡಿ, ಹೈಮಾಸ್ಟ್ ದೀಪ ಸೇರಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.
ಹಲವು ಕಡೆಗಳಲ್ಲಿ ಕಾಮಗಾರಿಗಳು ಆರಂಭವಾಗಿದ್ದು, ಕೆಲಕಡೆ ಪೂರ್ಣಗೊಂಡಿವೆ. ಉಳಿದ ಕಾಮಗಾರಿಗಳನ್ನು ಹಂತಹಂತವಾಗಿ ಮುಗಿಸಲಾಗುವುದು ಎಂದು ತಿಳಿಸಿದರು.
ಪ್ರಾಚಾರ್ಯ ಸುಭಾಶ್ಚಂದ್ರ ಪಾಟೀಲ್, ಹನುಮಂತ ಜಗ್ಲಿ, ಜೆಡಿಎಸ್ ನಾಯಕರಾದ ಶರಣಪ್ಪ ಬಳೆ, ನಾಗರಾಜ ನಿಲಗಲ್, ದೊಡ್ಡರಂಗಣ್ಣ ಪಾಟೀಲ್ ಅಳ್ಳುಂಡಿ, ಪುರಸಭೆ ಸದಸ್ಯೆ ತಬ್ಸುಮ್ ಉದ್ದಾರ್, ಪ್ರಮುಖರಾದ ಮೈನುದ್ದೀನ್ ಡಿಜೆ, ಗೋವಿಂದ ನಾಯಕ ಚಿಕ್ಕಗುಡ್ಡ, ಚಂದಪ್ಪ ಅಕ್ಕರಕಿ, ಲಕ್ಷ್ಮಣ ಅಕ್ಕರಕಿ ಇತರರಿದ್ದರು.